ರಾಜ್ಯಕ್ಕೆ ತಪ್ಪದ ಶನಿ ಕಾಟ: ಕೊರೊನಾಗೆ ಮತ್ತೊಂದು ಬಲಿ ಮಂಡ್ಯ, ಯಾದಗಿರಿಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಒಂದೇ ದಿನ 196 ಪ್ರಕರಣ

ಬೆಂಗಳೂರು, ಮೇ ೨೩- ಕರ್ನಾಟಕಕ್ಕೆ ತಬ್ಲಿಘಿ ಕಂಟಕವಾಗಿ ಕಾಡಿದ ನಂತರ, ಅಜ್ಮೀರ್ ಆತಂಕ ಸೃಷ್ಟಿಸಿದ ಬೆನ್ನಲ್ಲೇ ಮುಂಬೈ ನಂಟು ರಾಜ್ಯದ ಜನರ ಹೆಗಲೇರಿ ಶನಿಯಂತೆ ಕಾಡತೊಡಗಿದೆ. ಸಕ್ಕರೆ ನಗರ ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವುದು ತೀವ್ರ ಆತಂಕ ತಂದೊಡ್ಡಿದೆ.

  • ರಾಜ್ಯದಲ್ಲಿ ಹೊಸದಾಗಿ 196 ಸೋಂಕು ಪ್ರಕರಣ.
  •  ಒಟ್ಟಾರೆ ಸೋಂಕಿತರ ಸಂಖ್ಯೆ 1,939ಕ್ಕೇರಿಕೆ.
  •  ಬೆಂಗಳೂರಿನಲ್ಲಿ ಮತ್ತೊಬ್ಬ ವ್ಯಕ್ತಿ ಸೋಂಕಿಗೆ ಬಲಿ.
  •  ಬೆಂಗಳೂರಿನಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10ಕ್ಕೇರಿಕೆ.
  •  ರಾಜ್ಯದಲ್ಲಿ ಒಟ್ಟಾರೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 42ಕ್ಕೇರಿಕೆ.
  •  ಯಾದಗಿರಿಯಲ್ಲಿ ಒಂದೇ ದಿನ 72 ಸೋಂಕು ಪ್ರಕರಣ ಪತ್ತೆ.

ರಾಜ್ಯದಲ್ಲಿಂದು ಹೊಸದಾಗಿ 196 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 1,939 ಕ್ಕೇರಿದ್ದು, ಜನತೆ ಬೆಚ್ಚಿಬೀಳುವಂತಾಗಿದೆ. ಕೊರೊನಾ ಮಹಾಮಾರಿಯ ಸೋಂಕಿಗೆ ಬೆಂಗಳೂರಿನಲ್ಲಿಂದು ವ್ಯಕ್ತಿಯೊಬ್ಬ ಬಲಿಯಾಗಿದ್ದು, ಇದುವರೆಗೂ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 42ಕ್ಕೇರಿದೆ.

ಇಂದು ಪತ್ತೆಯಾಗಿರುವ ಹೊಸ ಸೋಂಕು ಪ್ರಕರಣಗಳ ಪೈಕಿ 172 ಸೋಂಕಿತರು ಮುಂಬೈ ನಂಟು ಹೊಂದಿರುವವರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು ಹೊಸದಾಗಿ ನಾಲ್ಕು ಹೊಸಪ್ರಕರಣಗಳು ಪತ್ತೆಯಾಗಿದ್ದು, ನಗರವಾಸಿಗಳನ್ನು ಆತಂಕದಲ್ಲಿರುವಂತೆ ಮಾಡಿದೆ.

ಯಾದಗಿರಿ – 72 ಪ್ರಕರಣಗಳು ದಾಖಲಾಗಿದ್ದು, ಕಲ್ಯಾಣ ಕರ್ನಾಟಕಕ್ಕೂ ಮಹಾಮಾರಿಯ ವಕ್ರದೃಷ್ಟಿ ಬಿದ್ದಿದೆ. ರಾಯಚೂರು 39, ಗದಗ – 15, ಮಂಡ್ಯ – 28, ಚಿಕ್ಕಬಳ್ಳಾಪುರ – 20, ಹಾಸನ – 4, ದ. ಕನ್ನಡ – 3, ಉ. ಕನ್ನಡ – 2, ಕೋಲಾರ – 2, ಧಾರವಾಡ, ಕಲಬುರಗಿ, ಬೆಳಗಾವಿಯಲ್ಲಿ ತಲಾ 1 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ರಾಜ್ಯದಲ್ಲಿ 1,297 ಸಕ್ರಿಯ ಪ್ರಕರಣಗಳಾಗಿದ್ದು, ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 598 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಗುಜರಾತ್, ಮಹಾರಾಷ್ಟ್ರ, ರಾಜಸ್ತಾನ್, ನವದೆಹಲಿ, ಆಂಧ್ರಪ್ರದೇಶ, ಮುಂತಾದ ರಾಜ್ಯಗಳಿಗೆ ಭೇಟಿಕೊಟ್ಟು ವಾಪಸ್ ಬಂದವರಲ್ಲೇ ಸೋಂಕು ದೃಢಪಟ್ಟಿರುವುದು ಆತಂಕಕ್ಕೆ ಈಡುಮಾಡಿದೆ. ಉಳಿದವರು ಸೋಂಕಿತರ ಸಂಪರ್ಕಕ್ಕೆ ಬಂದವರೆಂದು ಇಲಾಖೆ ತಿಳಿಸಿದೆ.

ಮಹಾರಾಷ್ಟ್ರಕ್ಕೆ ಹೋಗಿಬಂದವರಲ್ಲೇ ಗುಂಪುಗುಂಪಾಗಿ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿವೆ. ಮಹಾರಾಷ್ಟ್ರದ ನಂಟು ರಾಜ್ಯದ 5 ಜಿಲ್ಲೆಗಳಿಗೆ ವ್ಯಾಪಿಸಿದ್ದು, ಸೋಂಕು ದಿನೇದಿನೇ ಹೆಚ್ಚಾಗುತ್ತಿದೆ.

ಬೆಂಗಳೂರಿನ ಶಿವಾಜಿನಗರ, ಪಾದರಾಯನಪುರದಲ್ಲಿ ಲಾಕ್ ಡೌನ್ ಬಿಗಿಗೊಳಿಸಿದ್ದರೂ, ಇಂದು ಜನರ ಓಡಾಟ ಹೆಚ್ಚಾಗಿದೆ. ರಾಜ್ಯದಲ್ಲಿ 196 ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಇದುವರೆಗೆ ದಾಖಲಾದ ಗರಿಷ್ಟ ಪ್ರಮಾಣದ ಏರಿಕೆಯಾಗಿದೆ.

ಇದುವರೆಗೂ 1,939 ಪ್ರಕರಣಗಳು ದೃಢಪಟ್ಟಿದ್ದು, ಸಂಜೆ ವೇಳೆಗೆ ಸೋಂಕಿತರ ಸಂಖ್ಯೆ 2 ಸಾವಿರ ದಾಟುವ ಸಾಧ್ಯತೆ ಇದೆ. ನಾಲ್ಕನೇ ಹಂತದ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಜನರು ಮತ್ತು ವಾಹನಗಳ ಓಡಾಟ ಹೆಚ್ಚಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ ಎಂದು ವೈದ್ಯಕೀಯ ಸಮುದಾಯ ಅಭಿಪ್ರಾಯಪಟ್ಟಿದೆ.

ರಾಜ್ಯದಲ್ಲಿ ನಿನ್ನೆ 1,743 ಪ್ರಕರಣಗಳು ದಾಖಲಾಗಿದ್ದರೆ, ಇಂದು ಪತ್ತೆಯಾದ ಹೊಸಪ್ರಕರಣಗಳ ಸೇರ್ಪಡೆಯಿಂದ 2 ಸಾವಿರದ ಗಡಿ ದಾಟುವ ಸಾಧ್ಯತೆ ಹೆಚ್ಚಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿಂದು ವ್ಯಕ್ತಿಯೊಬ್ಬ ಸೋಂಕಿನಿಂದ ಮೃತಪಟ್ಟಿದ್ದು, ಇದುವರೆಗೂ ನಗರದಲ್ಲಿ ಸತ್ತವರ ಸಂಖ್ಯೆ 10ಕ್ಕೇರಿದೆ.

ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ‌‌ಡಾ. ಸುಧಾಕರ್, ಕೊರೊನಾ ಸೋಂಕಿನಿಂದ ಮೃತಪಟ್ಟ ಕೊರೊನಾ ಯೋಧರಿಗೆ ಮಾತ್ರ ವಿಮಾ ಸೌಲಭ್ಯ ದೊರೆಯಲಿದೆ. ಇತರರಿಗೆ ಈ ಸೌಲಭ್ಯ ದಕ್ಕುವುದಿಲ್ಲ ಎಂದು ಹೇಳಿದ್ದಾರೆ.
ಕೊರೊನಾ ಯೋಧರು ಕರ್ತವ್ಯ ಸಮಯದಲ್ಲಿ ಸತ್ತರೆ, 50 ಲಕ್ಷ ರೂ. ವಿಮೆ ದೊರೆಯಲಿದೆ.

 

Leave a Comment