ರಾಜೇಗೌಡರಿಂದ ವಿನೂತನ ಪ್ರತಿಭಟನೆ

ಕೆ.ಆರ್.ಪೇಟೆ,ಜು.11: ತಾಲೂಕಿನ ಸಾಧುಗೋನಹಳ್ಳಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಹುಲ್ಲಿನ ಮೆದೆಯು ಸುಟ್ಟುಹೋಗಿದ್ದು ರೈತ ರಾಜೇಗೌಡ ಅವರು ತನಗಾಗಿರುವ ನಷ್ಠವನ್ನು ಭರಿಸಿಕೊಡುವಂತೆ ತಾಲೂಕು ಕಛೇರಿಗೆ ಅರ್ಜಿ ನೀಡಲು ಹೋಗಿದ್ದಾಗ ಕಛೇರಿಯ ಸಿಬ್ಬಂಧಿಗಳು ಮನವಿಯನ್ನು ಸ್ವೀಕರಿಸದೇ ಬೇಜವಬ್ಧಾರಿತನದಿಂದ ವರ್ತಿಸಿ ಪರಿಹಾರ ನೀಡಲು ಸಾದ್ಯವಿಲ್ಲ ಎಂದು ಅರ್ಜಿಯನ್ನು ಮರಳಿ ನೀಡಿದ ಕ್ರಮದಿಂದ ಸಿಟ್ಟಿಗೆದ್ದು ನಿನ್ನೆ ಪಟ್ಟಣದ ಮಿನಿ ವಿಧಾನಸೌಧದ ಬಾಗಿಲಿಗೆ ಮೇವಿಲ್ಲದೇ ಒದ್ದಾಡುತ್ತಿರುವ ಎರಡು ಸೀಮೆ ಹಸುಗಳನ್ನು ಬಾಗಿಲಿಗೆ ಕಟ್ಟಿ ವಿನೂತನವಾಗಿ ಪ್ರತಿಭಟನೆ ನಡೆಸಿದ ಘಟನೆಯು ನಡೆಯಿತು.
ಬಡ ರೈತನಾದ ನಾನು ಜೀವನದ ನಿರ್ವಹಣೆಗಾಗಿ ಎರಡು ಸೀಮೆ ಹಸುಗಳನ್ನು ಸಾಕುತ್ತಿದ್ದೆ. ಅಗ್ನಿ ಅವಘಡದಲ್ಲಿ ನನ್ನ ಹುಲ್ಲಿನ ಮೆದೆಯು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಹಸುಗಳಿಗೆ ತಿನ್ನಿಸಲು ಮೇವಿಲ್ಲದೇ ಒದ್ದಾಡುತ್ತಿದ್ದೇನೆ. ಆರ್ಥಿಕವಾಗಿ ಸಂಕಷ್ಠದಲ್ಲಿರುವ ತಮಗೆ ಧನಸಹಾಯ ಮಾಡಿ ಪರಿಹಾರವನ್ನು ದೊರಕಿಸಿಕೊಡಿ ಎಂದರೆ ತಹಶೀಲ್ದಾರರ ಕಛೇರಿಯ ಸಿಬ್ಬಂಧಿಗಳು ಪೂರಕವಾದ ಸಹಕಾರ, ಸಹಾಯ ಹಸ್ತವನ್ನು ಚಾಚುತ್ತಿಲ್ಲ. ನನ್ನ ಹಸುಗಳಿಗೆ ತಿನ್ನಿಸಲು ಮೇವು ಹುಲ್ಲನ್ನು ನೀಡಿ, ಇಲ್ಲವೇ ಹಸುಗಳನ್ನು ನೀವೇ ಸಾಕಿ ಎಂದು ಮಿನಿ ವಿಧಾನಸೌಧದ ಬಾಗಿಲಿಗೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ ರಾಜೇಗೌಡರನ್ನು ಸಮಾಧಾನಪಡಿಸಿದ ತಹಶೀಲ್ದಾರ್ ಶಿವಮೂರ್ತಿ ಅವರು ನಿನ್ನೆ ನಾನು ಕಛೇರಿಯಲ್ಲಿರಲಿಲ್ಲ, ಸಿಬ್ಬಂಧಿಗಳು ರಾಜೇಗೌಡರೊಂದಿಗೆ ಅನುಚಿತವಾಗಿ ವರ್ತಿಸಿದ್ದು ಗೊತ್ತಾಯಿತು. ಸೆಸ್ಕ್ ಇಲಾಖೆಯ ಎಇಇ ಅವರಿಗೆ ಸೂಕ್ತ ಪರಿಹಾರವನ್ನು ಕೊಡಿಸಿಕೊಡುವಂತೆ ಮನವಿ ಮಾಡಿದ್ದೇನೆ. ರೈತ ರಾಜೇಗೌಡರ ಸಂಕಷ್ಠಕ್ಕೆ ಮಿಡಿಯಲು, ಸಹಾಯ ಮಾಡಲು ತಾಲೂಕು ಆಡಳಿತವು ಸಿದ್ಧವಿದೆ ಎಂದು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ರೈತ ರಾಜೇಗೌಡ ಅವರು ತನ್ನ ಹಸುಗಳನ್ನು ವಾಪಸ್ಸು ಮನೆಗೆ ಕರೆದುಕೊಂಡು ಹೋಗಿ ಪ್ರತಿಭಟನೆಯನ್ನು ಹಿಂಪಡೆದುಕೊಂಡರು. ಈ ಸಂದರ್ಭದಲ್ಲಿ ಕ್ರೈಂ ವಿಭಾಗದ ಮುಖ್ಯಪೇದೆ ಸೋಮಣ್ಣ, ರಾಜಶ್ವನಿರೀಕ್ಷಕಿ ಚಂದ್ರಕಲಾ, ಗ್ರಾಮ ಲೆಕ್ಕಾಧಿಕಾರಿ ಹರೀಶ್, ರೈತ ಹೋರಾಟಗಾರ ಮುರುಗೇಶ್‍ಭೋವಿ ಮತ್ತಿತರರು ಉಪಸ್ಥಿತರಿದ್ದರು.

Leave a Comment