ರಾಜೀವ್ ಹಂತಕರ ಬಿಡುಗಡೆ ರಾಜ್ಯಪಾಲರ ನಕಾರ ಸ್ವಾಮಿ ವಿಶ್ವಾಸ

ನವದೆಹಲಿ, ಸೆ. ೧೦- ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿನ ಎಲ್ಲಾ 7 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸಲು ಕೋರಿ ತಮಿಳುನಾಡು ಸರ್ಕಾರ ಮಾಡಿರುವ ಶಿಫಾರಸನ್ನು ರಾಜ್ಯಪಾಲ ಬನ್ಸಾರಿಲಾಲ್ ಪುರೋಹಿತ್ ತಿರಸ್ಕರಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣ್ಯಂ ಸ್ವಾಮಿ ಹೇಳಿದ್ದಾರೆ.
`ಅಪರಾಧಿಗಳ ಬಿಡುಗಡೆ ಕೋರಿ ತಮಿಳುನಾಡು ಸರ್ಕಾರ ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿ, ಕೇವಲ ಅದು ಶಿಫಾರಸು ಮಾತ್ರ. ಅದನ್ನು ಪರಿಗಣಿಸಬೇಕು ಎಂಬ ಕಡ್ಡಾಯವಿಲ್ಲ. ಪರಿಗಣಿಸುವುದು, ತಿರಸ್ಕರಿಸುವುದು ರಾಜ್ಯಪಾಲರ ವಿವೇಚನೆ ಬಿಟ್ಟಿದ್ದು` ಎಂದು ಸುಬ್ರಮಣ್ಯಂ ಸ್ವಾಮಿ ಸುದ್ಧಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಅಪರಾಧಿಗಳ ಬಿಡುಗಡೆ ಕೋರಿಕೆ ಶಿಫಾರಸ್ಸು ಕುರಿತಂತೆ ರಾಜ್ಯಪಾಲರ ನಿರ್ದೇಶನ ಪಡೆಯಲು ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು. ಇದಾದ ಮೂರನೇ ದಿನವೇ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾ‌‌ಡಿ ಕೆ. ಪಳನಿಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಪರಾಧಿಗಳ ಬಿಡುಗಡೆಗೆ ಶಿಫಾರಸು ಮಾಡಲು ತೀರ್ಮಾನಿಸಲಾಗಿತ್ತು.
ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹತ್ಯೆ ಪ್ರಕರಣದಲ್ಲಿ ನಳಿನಿ, ಪೆರಾರಿವಾಲನ್, ಮುರುಗನ್, ಸಂತಾನ್ ರಾಬರ್ಟ್ ಪಿಯೋಸ್, ಜಯಕುಮಾರ್ ಮತ್ತು ರವಿಚಂದ್ರನ್ ಈ ಏಳು ಮಂದಿ ಅಪರಾಧಿಗಳು ಎಂದು ನ್ಯಾಯಾಲಯ ಘೋಷಿಸಿದ್ದು, ಕಳೆದ 27 ವರ್ಷಗಳಿಂದ ಜೈಲಿನಲ್ಲಿ ಆಜೀವ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

Leave a Comment