ರಾಜೀನಾಮೆ ಪ್ರಹಸನ ಸಂಜೆ ತೆರೆ : ಸ್ಪೀಕರ್ ಮುಂದೆ ಹಾಜರಾಗಲು ಅತೃಪ್ತರಿಗೆ ಸುಪ್ರೀಂ ಸೂಚನೆ

ನವದೆಹಲಿ, ಜು. ೧೧- ಕರ್ನಾಟಕದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ಕ್ಷಣಕ್ಕೊಂದು ರೀತಿ ಹೊಸ ಆಯಾಮ ಪಡೆದುಕೊಳ್ಳುತ್ತಿರುವುದರ ನಡುವೆಯೇ ಜೆಡಿಎಸ್- ಕಾಂಗ್ರೆಸ್‌ನ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಕುರಿತು ಇಂದು ಸಂಜೆಯೊಳಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಸಂಜೆ 6 ಗಂಟೆಯೊಳಗೆ ಅತೃಪ್ತ ಶಾಸಕರು ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗಿ ವಿವರಣೆ ನೀಡಬೇಕು,

  •  ಅತೃಪ್ತ ಶಾಸಕರ ರಾಜೀನಾಮೆ ವಿಚಾರ ಸಂಜೆಯೊಳಗೆ ಇತ್ಯರ್ಥಪಡಿಸಲು ವಿಧಾನಸಭಾಧ್ಯಕ್ಷರಿಗೆ ಸುಪ್ರೀಂ ಸೂಚನೆ.
  •  ಸಂಜೆ 6 ಗಂಟೆಯೊಳಗೆ ವಿಧಾನಸಭಾಧ್ಯಕ್ಷರ ಮುಂದೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ತಾಕೀತು.
  •  ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಮುಂಬೈನಿಂದ ಬೆಂಗಳೂರಿನತ್ತ ಹೊರಟಿರುವ ಅತೃಪ್ತ ಶಾಸಕರು.
  •  ನಾಳೆಗೆ ವಿಚಾರಣೆಯನ್ನು ಮುಂದೂಡಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್.
  •  ಅತೃಪ್ತ ಶಾಸಕರ ರಾಜೀನಾಮೆ ಅಂಗೀಕರಿಸಲು ವಿಧಾನಸಭಾಧ್ಯಕ್ಷರಿಂದ ವಿಳಂಬ ಧೋರಣೆ ಎಂಬ ಅತೃಪ್ತರ ಆಕ್ಷೇಪ.
  •  ಇಂದೇ ರಾಜೀನಾಮೆ ಪತ್ರಗಳ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡಲು ಸುಪ್ರೀಂ ಆದೇಶ.

ಅಗತ್ಯವೆನಿಸಿದರೆ ಮತ್ತೊಮ್ಮೆ ರಾಜೀನಾಮೆ ಪತ್ರಗಳನ್ನು ಸಭಾಧ್ಯಕ್ಷರಿಗೆ ಸಲ್ಲಿಸಬೇಕು ಎಂದು ಸುಪ್ರೀಂಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕಳೆದೊಂದು ವಾರದಿಂದ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಮೂವರು ಸದಸ್ಯರ ವಿಭಾಗೀಯ ಪೀಠ, ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳನ್ನು ಅಂಗೀಕರಿಸುವ ವಿಚಾರದಲ್ಲಿ ಸಂಜೆಯೊಳಗೆ ಸ್ಪಷ್ಟ ತೀರ್ಮಾನ ಪ್ರಕಟಿಸಬೇಕು ಎಂದು ಗಡುವು ನೀಡಿರುವುದರಿಂದ ಸಭಾಧ್ಯಕ್ಷ ರಮೇಶ್ ಕುಮಾರ್ ಅವರಿಗೆ ಹಿನ್ನಡೆಯಾದಂತಾಗಿದೆ.

ನ್ಯಾಯಮೂರ್ತಿಗಳಾದ ದೀಪಕ್ ಗುಪ್ತಾ ಮತ್ತು ಅನಿರುದ್ಧ ಬೋಸ್ ಈ ಪೀಠದ ಸದಸ್ಯರಾಗಿದ್ದಾರೆ.
ರಾಜೀನಾಮೆ ನೀಡಿರುವ 13 ಅತೃಪ್ತ ಶಾಸಕರ ರಾಜೀನಾಮೆಗಳ ಪೈಕಿ 9 ಶಾಸಕರ ರಾಜೀನಾಮೆ ಕ್ರಮಬದ್ಧವಾಗಿಲ್ಲ. ಅವರು ಮತ್ತೊಮ್ಮೆ ನಿಗದಿತ ನಮೂನೆಯಲ್ಲಿ ನಾಮಪತ್ರ ಸಲ್ಲಿಸಬೇಕು. ಉಳಿದ 5 ಮಂದಿ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿದ್ದು, ರಾಜೀನಾಮೆ ನೀಡಲು ಕಾರಣಗಳೇನು ಎಂಬುದನ್ನು ತಮ್ಮ ಎದುರಿಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕೆಂದು ಸಭಾಧ್ಯಕ್ಷ ರಮೇಶ್ ಕುಮಾರ್ ನೋಟಿಸ್ ಜಾರಿ ಮಾಡಿದ್ದರು.

ಇದರಿಂದ ಅಸಮಾಧಾನಗೊಂಡ ಅತೃಪ್ತ ಶಾಸಕರು ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಲ್ಲಿ ವಿಧಾನಸಭಾಧ್ಯಕ್ಷರು ಉದ್ದೇಶಪೂರ್ವಕ ವಿಳಂಬ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅತೃಪ್ತ ಶಾಸಕರು ನಿನ್ನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡಿದ್ದ ಸುಪ್ರೀಂಕೋರ್ಟಿನ ವಿಭಾಗೀಯ ಪೀಠ, ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಹಾಗೂ ರಾಜ್ಯದಲ್ಲಿನ ದೋಸ್ತಿ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ.
ಮುಂಬೈನಲ್ಲಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 10 ಶಾಸಕರು ಸಭಾಧ್ಯಕ್ಷರ ಧೋರಣೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅತೃಪ್ತರ ಪರವಾಗಿ ನಿನ್ನೆ ವಾದ ಮಂಡಿಸಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಈ ಕುರಿತು ತುರ್ತು ವಿಚಾರಣೆ ನಡೆಸಬೇಕೆಂದು ಮನವಿ ಮಾಡಿದ್ದರು.

ತುರ್ತು ವಿಚಾರಣೆಯನ್ನು ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಅವರ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಯನ್ನು ಇಂದು ಕೈಗೆತ್ತಿಕೊಳ್ಳುವುದಾಗಿ ಹೇಳಿತ್ತು.
ಡಿಜಿಪಿಗೆ ಸೂಚನೆ
ಸ್ಪೀಕರ್ ಕಚೇರಿಗೆ ಹಾಜರಾಗುವ ಅತೃಪ್ತ ಶಾಸಕರಿಗೆ ಸೂಕ್ತ ಬಿಗಿ ಭದ್ರತೆಯನ್ನು ಒದಗಿಸಬೇಕೆಂದು ಸುಪ್ರೀಂಕೋರ್ಟ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಿದೆ.
ಹತ್ತು ಮಂದಿ ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದು, ವಿಧಾನಸೌಧದಲ್ಲಿನ ಸಭಾಧ್ಯಕ್ಷರ ಕಚೇರಿವರೆಗೆ ತೆರಳುವವರೆಗೂ ಮತ್ತು ಅದಾದ ನಂತರದವರೆಗೂ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಸುಪ್ರೀಂ ಸ್ಪಷ್ಟನೆ
ಈಗಾಗಲೇ 15 ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರು ಸುಪ್ರೀಂಕೋರ್ಟ್ ನ್ಯಾಯಾಧೀಶರ ಗಮನ ಸೆಳೆದಾಗ ಅದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, `ನಮ್ಮ ಮುಂದಿರುವ 10 ಮಂದಿ ಶಾಸಕರ ರಾಜೀನಾಮೆ ಪತ್ರಗಳಿಗೆ ಸಂಬಂಧಿಸಿದ ವಿಚಾರ ಕುರಿತು ಮಾತ್ರವೇ ನಮ್ಮ ತೀರ್ಪನ್ನು ನೀಡಲಾಗುವುದು. ಉಳಿದವರ ವಿಚಾರ ನಮಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿತು.
ಅತೃಪ್ತ ಶಾಸಕರ ರಾಜೀನಾಮೆ ಪತ್ರಗಳ ಕುರಿತು ಸಂಜೆಯೊಳಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕೆಂದು ಸುಪ್ರೀಂಕೋರ್ಟ್ ವಿಧಾನಸಭಾಧ್ಯಕ್ಷರಿಗೆ ಸೂಚಿಸಿದ್ದು, ಸಭಾಧ್ಯಕ್ಷರು ಕೈಗೊಳ್ಳುವ ತೀರ್ಮಾನ ಏನೆಂಬುದನ್ನು ನ್ಯಾಯಪೀಠಕ್ಕೆ ತಿಳಿಸುವಂತೆಯೂ ನಿರ್ದೇಶನ ನೀಡಲಾಗಿದೆ.
ಜು. 1 ರಿಂದ ರಾಜ್ಯದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಕುರಿತು ಅತೃಪ್ತರ ಪರ ವಕೀಲರು ಸ್ವವಿವರವಾಗಿ ನ್ಯಾಯಪೀಠದ ಮುಂದಿಟ್ಟಾಗ, ಇದರಲ್ಲಿ ನಮ್ಮನ್ನು ಆಶ್ಚರ್ಯಗೊಳಿಸುವ ವಿಚಾರವೇನು ಇಲ್ಲ ಎಂದು ಸ್ಪಷ್ಟಪಡಿಸಿತು.

 

Leave a Comment