ರಾಜಕೀಯ ಪ್ರೇರಿತ ಬಂದ್: ಜ್ಯೋತಿಗಣೇಶ್

ತುಮಕೂರು, ಸೆ. ೧೦- ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಮುಳುಗುತ್ತಿರುವ ಕಾಂಗ್ರೆಸ್ ದೋಣಿಯನ್ನು ಎತ್ತಲು ಅರ್ಧ ಸತ್ಯವನ್ನು ಹೇಳುವ ಮೂಲಕ ಎಂದಿನಂತೆ ಜನಸಾಮಾನ್ಯರನ್ನು ದಾರಿ ತಪ್ಪಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ನಿರತವಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ಜಿ.ಬಿ. ಜ್ಯೋತಿಗಣೇಶ್ ಆರೋಪಿಸಿದ್ದಾರೆ.

ದಿನದಿಂದ ದಿನಕ್ಕೆ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಬೆಲೆ ಏರಿಕೆ ಅನಿವಾರ್ಯವಾಗಿದ್ದು, ಈ ಬೆಲೆ ಏರಿಕೆಯ ಲಾಭವನ್ನು ರಾಜ್ಯ ಸರ್ಕಾರ ಮಾತ್ರ ಪಡೆದುಕೊಂಡಿದೆ. ಬೆಲೆ ಏರಿಕೆಯಿಂದ ರಾಜ್ಯ ಸರ್ಕಾರಕ್ಕೆ ಮಾತ್ರ ಅನುಕೂಲವಾಗಿದೆ. ಆದರೂ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಾ ರಾಜಕೀಯದ ಲಾಭ ಪಡೆಯಲು ಹೊರಟಿರುವುದು ರಾಜಕೀಯ ಪ್ರೇರಿತವಾದದ್ದು ಎಂದಿದ್ದಾರೆ.

ಲೋಕಸಭಾ ಚುನಾವಣೆಯ ಗಿಮಿಕ್ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷವನ್ನು ಈಗಾಗಲೇ ದೇಶದ ಜನತೆ ತಿರಸ್ಕರಿಸಿದ್ದು, ಗೌರಿ – ಗಣೇಶ ಹಬ್ಬದ ಆಚರಣೆಗೆ ಸಿದ್ದರಾಗುತ್ತಿರುವ ದೇಶದ ಜನರ ಸಂಭ್ರಮಾಚರಣೆಗೆ ಎಲ್ಲಾ ರೀತಿಯಿಂದಲೂ ತೊಡಕು ಉಂಟು ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

Leave a Comment