ರಾಜಕೀಯ ಡ್ರಾಮಾ : ಸಾರ್ವಜನಿಕರ ವಿಡಂಬನೆ

ರಾಯಚೂರು.ಜು.12- ರಾಜ್ಯ ರಾಜಕೀಯದ ಅಧಿಕಾರ ಕಿತ್ತಾಟ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ನಿರಂತರ ಪ್ರಸಾರದಿಂದ ಕಂಗೆಟ್ಟ ಜನ ಸಾಮಾಜಿಕ ಜಾಲತಾಣದಲ್ಲಿ ಈ ಜಂಜಾಟ ಸಾಕು, ರಾಜ್ಯಕ್ಕೆ ಶಾಂತಿ ಸುವ್ಯವಸ್ಥೆಯ ಸರ್ಕಾರ ಬೇಕು ಎನ್ನುವ ಸಂದೇಶ ರವಾನಿಸಲಾಗುತ್ತಿದೆ.
ಲಿಂಗಸೂಗೂರಿನ ಶೇಖ್ ಮಹ್ಮದ್ ಎಂಬುವವರು ರಾಜ್ಯದ ರಾಜಕೀಯ ಡ್ರಾಮಾದ ಬಗ್ಗೆ ಅತ್ಯಂತ ವಿಡಂಬನಾತ್ಮಕವಾಗಿ `ಟಿಕ್ ಟಾಕ್` ಮಾಡಿದ್ದಾರೆ. ಅಧಿಕಾರಕ್ಕಾಗಿ ಕಾಂಗ್ರೆಸ್, ಜಾದಳ ಮತ್ತು ಬಿಜೆಪಿ ಸರ್ಕಾರದ ಮಧ್ಯೆ ನಡೆಯುತ್ತಿರುವ ಈ ಹಗ್ಗಜಗ್ಗಾಟ ಬದಲು ಮೂರು ಪಕ್ಷ ಸೇರಿ ಸರ್ಕಾರ ರಚಿಸುವಂತೆ ಸಲಹೆ ನೀಡಿದ್ದಾರೆ. ರಾಜ್ಯದಲ್ಲಿ ವಿರೋಧ ಪಕ್ಷವಿಲ್ಲದಿದ್ದರೂ, ಪರವಾಗಿಲ್ಲ.
ಮೂರು ಪಕ್ಷಗಳ ಸರ್ಕಾರದಲ್ಲಿ ಒಂದಷ್ಟು ಸಚಿವ ಸ್ಥಾನದ ಖಾತೆ ಹೆಚ್ಚು ಮಾ‌ಡಿಕೊಳ್ಳಿ. ಉದಾಹರಣೆಗೆ ಇಲ್ಲಿವರೆಗೂ ಕೃಷಿ ಇಲಾಖೆ ಸಚಿವರು ಒಬ್ಬರಿರುತ್ತಿದ್ದರು. ಇದರ ಬದಲಾಗಿ ಕೃಷಿ ಇಲಾಖೆಯಲ್ಲಿ ಬರುವ ಬೆಳೆಗಳನ್ನಾಧರಿಸಿ, ಸಚಿವಾಲಯ ಮಾಡಿ, ಭತ್ತ ಸಚಿವ, ರಾಗಿ ಸಚಿವ ಹಾಗೂ ಜೋಳದ ಸಚಿವ ಹೀಗೆ ಸಚಿವ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ರಾಜ್ಯದ ಜನರು ಶಾಂತಿ, ನೆಮ್ಮದಿಯಿಂದ ಇರಲು ಬಿಡುವಂತೆ ವ್ಯಂಗ್ಯವಾಗಿ ಮನವಿ ಮಾಡಿದ್ದಾರೆ.
ಕಳೆದ ಐದಾರು ದಿನಗಳಿಂದ ರಾಜ್ಯದಲ್ಲಿ ನಡೆದ ಬೆಳವಣಿಗೆ ಮತ್ತು ಮಾಧ್ಯಮಗಳಲ್ಲಿ ನಿರಂತರ ಬಿತ್ತರವಾಗುತ್ತಿರುವ ಸುದ್ದಿಯಿಂದ ಬೇಸತ್ತ ಜನ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಬೆಳವಣಿಗೆಗಳ ಬಗ್ಗೆ ವ್ಯಂಗ್ಯದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment