ರಾಜಕಾಲುವೆ ಸ್ಥಳ ವಶಕ್ಕೆ ಪಡೆಯಲು ಆಗ್ರಹ

ಬೆಂಗಳೂರು, ಜೂ.೧೪- ಮಳೆಗಾಲ ಆರಂಭವಾಗಿರುವ ಹಿನ್ನಲೆ, ಬಿಬಿಎಂಪಿ ತ್ವರಿತವಾಗಿ ರಾಜಕಾಲುವೆ ಕಬಳಿಕೆ ಮಾಡಿರುವ ಜಾಗವನ್ನು ವಶಕ್ಕೆ ಪಡೆದು, ಸುಗಮವಾಗಿ ನೀರು ಹರಿಯುವಂತೆ ನೋಡಿಕೊಳ್ಳಬೇಕೆಂದು ಒತ್ತಾಯಿಸಿ ಭೂ- ಕಬಳಿಕೆ ವಿರೋಧಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಗರದಲ್ಲಿಂದು ಬಿಬಿಎಂಪಿ ಪ್ರಧಾನ ಕಚೇರಿ ಮುಂಭಾಗ ಜಮಾಯಿಸಿದ ಹೋರಾಟ ಸಮಿತಿ ಸದಸ್ಯರು, ನಗರದಲ್ಲಿ ಮಳೆ ಸುರಿದರೆ ಜನ ವಸತಿ ಹಾಗೂ ರಸ್ತೆ, ಪ್ರದೇಶಗಳಿಗೆ ನೀರು ನುಗ್ಗುತ್ತಿದೆ. ಹಾಗಾಗಿ, ಕೂಡಲೇ ಬಿಬಿಎಂಪಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಮಿತಿಯ ಗೌರವ ಅಧ್ಯಕ್ಷ ಎಚ್. ಎಸ್. ದೊರೆಸ್ವಾಮಿ, ಮಾತನಾಡಿ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲ ಬಂದರೆ ಸಾಕು ಬೆಂಗಳೂರಿನ ತಗ್ಗು ಪ್ರದೇಶಗಳು ಜಲಾವೃತಗೊಂಡು ಸಾರ್ವಜನಿಕರು ಸಂಕಷ್ಟ ಪಡುವಂತಾಗಿದೆ.
ಅಷ್ಟೇ ಅಲ್ಲದೆ ಮಳೆ ಸುರಿದ ದಿನದಲ್ಲಿ ಹಲವಾರು ರಸ್ತೆಗಳು ಹೊಳೆದಂತಾಗಿ ವಾಹನ ಸವಾರರು ಪರಾದಾಡುವಂತ ಸ್ಥಿತಿ ಇದೆ.ಹೀಗಾಗಿ ರಾಜಕಾಲುವೆ ಒತ್ತುವರಿ ಹಾಗೂ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿಬೇಕು ಎಂದರು.ಬಡವರ ಸಣ್ಣ ಮನೆಗಳು ನೆಲಸಮ ಮಾಡಿದ ಬಿಬಿಎಂಪಿ, ಪ್ರಭಾವಿಗಳು ಮಾಡಿದ ಒತ್ತುವರಿ ತೆರವುಗೊಳಿಸಲು ವಿಫಲವಾಯಿತು.ಅಲ್ಲದೆ, ಪ್ರಭಾವಿಗಳು ಬಿಬಿಎಂಪಿ ನೋಟಿಸ್ ನೀಡಿದಾಗ ತಕ್ಷಣವೇ, ಅರು ನ್ಯಾಯಾಲಯಗಳಿಂದ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಆದರೆ, ಇದರ ವಿರುದ್ಧ ಬಿಬಿಎಂಪಿ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.
ಒತ್ತುವರಿ ತೆರವು ಸಂಬಂಧ ಬಿಬಿಎಂಪಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅದೇ ರೀತಿ, ಒಳಚರಂಡಿ ನೀರು ನಿಲ್ಲುವಿಕೆ ಬಗ್ಗೆ ಸೂಕ್ಷ್ಮವಾಗಿ ರಸ್ತೆ ಮೇಲೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾಗಿದೆ. ರಾಜಕಾರಣ ಹಾಗೂ ಅವುಗಳ ನಿರ್ವಹಣೆ ಇತ್ತೀಚಿನ ಮಾಹಿತಿಯನ್ನುಬಿಬಿಎಂಪಿಯು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಒತ್ತಾಯ ಮಾಡಿದರು.

Leave a Comment