ರಾಘವೇಂದ್ರ ಶ್ರೀಗಳ ಆರಾಧನಾ ಮಹೋತ್ಸವ

ಮಂತ್ರಾಲಯ, ಆ. ೧೬- ಮಂತ್ರಾಲಯದಲ್ಲಿನ ರಾಘವೇಂದ್ರ ಸ್ವಾಮಿಗಳ ಮೂಲವೃಂದಾವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ ಆರಂಭವಾಗಿದೆ.
ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಅಂಗವಾಗಿ 3 ದಿನಗಳ ಕಾಲ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಕಾರ್ಯಕ್ರಮಗಳು ನಡೆಯಲಿದ್ದು, ಮಧ್ಯಾರಾಧನೆಯು ಈ ಮೂರು ಆರಾಧನೆಗಳ ಮುಖ್ಯ ದಿನ ಎಂದು ಹೇಳಲಾಗಿದ್ದು, ಅಂದು ಲಕ್ಷಾಂತರ ಮಂದಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಂತ್ರಾಲಯದ ಮೂಲ ವೃಂದಾವನಕ್ಕೆ ಮಹೋತ್ಸವದ ಅಂಗವಾಗಿ ಕರ್ನಾಟಕ ಸೇರಿದಂತೆ ಭಾರತದ ನಾನಾ ರಾಜ್ಯಗಳಿಂದ ಜನರು ಆಗಮಿಸಲಿದ್ದಾರೆ. ವಿದೇಶಗಳಲ್ಲೂ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ವೃಂದಾವನಗಳಿದ್ದು, ಅಲ್ಲಿಯೂ ಸಹ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಇಂದಿನಿಂದ ಜರುಗಲಿದೆ.
ರಾಘವೇಂದ್ರಸ್ವಾಮಿಗಳು, ಜೀವಂತವಾಗಿ ವೃಂದಾವನ ಪ್ರವೇಶಿಸಿದ ದಿನವನ್ನು ಅವರ ಸ್ಮರಣಾರ್ಥವಾಗಿ ಆರಾಧನಾ ಮಹೋತ್ಸವವಾಗಿ ಆಚರಿಸಲಾಗುತ್ತಿದೆ. ವೃಂದಾವನ ಪ್ರವೇಶ ದಿನ, ಹಿಂದಿನ ದಿನ ಹಾಗೂ ಪ್ರವೇಶದ ಮರುದಿನದ ಸ್ಮರಣಾರ್ಥವಾಗಿ ಈ ಮೂರು ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ವೃಂದಾವನಕ್ಕೆ ಅಭಿಷೇಕ, ಅಲಂಕಾರ, ಭಜನೆ, ಅನ್ನಸಂತರ್ಪಮೆ ಹಾಗೂ ವಿವಿಧ ಸೇವಾಕೈಂಕರ್ಯಗಳನ್ನು ಇಂದಿನಿಂದ ಕೈಗೊಳ್ಳಲಾಗುತ್ತಿದ್ದು, ಕಾರ್ಯಕ್ರಮದ ಮೂರು ದಿನಗಳು ಮಹೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ದಾನಿಗಳು ನೀಡುವ ದವಸ, ಧಾನ್ಯ, ಹಣದ ನೆರವನ್ನು ಬಳಸಿ ಉಚಿತ ಅನ್ನ ಸಂತರ್ಪಣೆ ಮಾಡಲಾಗುತ್ತಿದೆ.
ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದ ಎದುರಿರುವ ಕಿರು ಮಂತ್ರಾಲಯ ಸೇರಿದಂತೆ ಎನ್‌ಆರ್ ಕಾಲೋನಿ, ಶ್ರೀನಗರ, ಎಜಿಎಸ್ ಲೇಔಟ್, ಹೊಸ್ಕೆರೆ ಹಳ್ಳಿ ಸೇರಿದಂತೆ ನಾನಾ ಕಡೆಗಳಲ್ಲೂ ಇಂದಿನಿಂದ ರಾಯರ ಆರಾಧನೆ ಆರಂಭವಾಗಲಿದೆ. ರಾಘವೇಂದ್ರ ಸ್ವಾಮಿಗಳಿಗೆ ಬ್ರಾಹ್ಮಣರ ಪೈಕಿ ಮಾದ್ವಸಮುದಾಯದ ಅನುಯಾಯಿಗಳು ಹೆಚ್ಚಾಗಿದ್ದು, ಜಾತಿಮೀರಿ ರಾಯರ ಆರಾಧನೆಯಲ್ಲಿ ಜನ ಪಾಲ್ಗೊಳ್ಳುತ್ತಿದ್ದಾರೆ.

Leave a Comment