ರಾಗಿ ಖರೀದಿ ಕೇಂದ್ರ ಉದ್ಘಾಟನೆ

ತುಮಕೂರು, ಜ. ೧೩- ರೈತರು ಬೆಳೆದ ರಾಗಿಗೆ ಬೆಂಬಲ ಬೆಲೆಯನ್ನು ನೀಡುವ ಸಲುವಾಗಿ ಪ್ರತಿ ರೈತರಿಂದ ಗರಿಷ್ಠ 75 ಕ್ವಿಂಟಾಲ್‍ನಷ್ಟು ರಾಗಿಯನ್ನು ಪ್ರತಿ ಕ್ವಿಂಟಾಲ್‌ಗೆ 2,300 ರೂ.ಗಳಂತೆ ಖರೀದಿಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಗಂಗಾಧರಯ್ಯ ತಿಳಿಸಿದರು.

ನಗರದ ಎಪಿಎಂಸಿ ಆವರಣದಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಉತ್ತಮ ಗುಣಮಟ್ಟದ ರಾಗಿಯನ್ನು ಪ್ರತಿ ಕ್ವಿಂಟಾಲ್‍ಗೆ ಕೇಂದ್ರ ಸರ್ಕಾರ 1900 ರೂ. ಹಾಗೂ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ 400 ರೂ.ಗಳಂತೆ ಪ್ರತಿ ಕ್ವಿಂಟಾಲ್‍ಗೆ 2,300 ರೂ.ಗಳಂತೆ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತವು ಖರೀದಿಸಲಾಗುವುದು ಎಂದರು.

ರಾಗಿಯನ್ನು ತುಮಕೂರು, ಗುಬ್ಬಿ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ ಮತ್ತು ಹುಳಿಯಾರು ಎಪಿಎಂಸಿ ಆವರಣದಲ್ಲಿ ಖರೀದಿಸಲಾಗುವುದು. ರಾಗಿಯನ್ನು ಖರೀದಿಗೆ ಬರುವ ರೈತರು ರಾಗಿ ಬೆಳೆ ದಾಖಲಾಗಿರುವ ಪಹಣಿ ಪತ್ರ ಮತ್ತು ಇತ್ತೀಚಿನ ಪಾಸ್‍ಪೋರ್ಟ್ ಸೈಜಿನ ಭಾವ ಚಿತ್ರವನ್ನು ಲಗತ್ತಿಸಿದ ಕಂದಾಯ ಇಲಾಖೆಯ ದೃಢೀಕರಣ ಪತ್ರ, ಕೃಷಿ ಇಲಾಖೆಯಿಂದ ಪಡೆದ ರಾಗಿ ಇಳುವರಿಯ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ, ಬ್ಯಾಂಕ್ ವ್ಯವಸ್ಥಾಪಕರಿಂದ ದೃಢೀಕರಿಸಲ್ಪಟ್ಟ ಬ್ಯಾಂಕ್ ಖಾತೆ ಸಂಖ್ಯೆ, ಪಾಸ್‍ಪುಸ್ತಕ ಛಾಯಾ ಪ್ರತಿಯೊಂದಿಗೆ ಖರೀದಿ ಕೇಂದ್ರದಲ್ಲಿ ಹಾಜರುಪಡಿಸಿ, ಬೆಳೆದ ರಾಗಿಯನ್ನು ಮಾರಾಟ ಮಾಡುವ ಬಗ್ಗೆ ಮುಂಚಿತವಾಗಿ ಫಿಸ್ಟ್ ತಂತ್ರಾಂಶದಲ್ಲಿ ಫೆಬ್ರವರಿ 18 ರೊಳಗಾಗಿ ನೋಂದಾಯಿಸಿದ ರೈತರಿಂದ ಮಾತ್ರ ರಾಗಿಯನ್ನು ಖರೀದಿ ಮಾಡಲಾಗುವುದು ಎಂದರು.

ರೈತರು ತರುವ ರಾಗಿಯ ಗುಣಮಟ್ಟವು ಸರ್ಕಾರದ ನಿರ್ಧಾರಿತ ನಿಯಮಾವಳಿಯನ್ವಯ ಉತ್ತಮ ಗುಣಮಟ್ಟದ್ದಾಗಿರಬೇಕು. ಒಂದು ವೇಳೆ ಯೋಗ್ಯವಲ್ಲದ ದಾಸ್ತಾನನ್ನು ತಿರಸ್ಕರಿಸಲಾಗುವುದು. ಖರೀದಿ ನಂತರ ಸದರಿ ರೈತರ ಬ್ಯಾಂಕ್ ಖಾತೆಗೆ ತುಮಕೂರು ಜಿಲ್ಲಾ ಕಛೇರಿಯಿಂದ ಆರ್‍ಟಿಜಿಎಸ್ ಮುಖಾಂತರ ಖರೀದಿ ಮೊತ್ತದ ಹಣ ಪಾವತಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಉಪನಿರ್ದೇಶಕ ದೊರೆಸ್ವಾಮಿ, ಜಂಟಿ ನಿರ್ದೇಶಕರು, ಎಎಫ್‍ಸಿಎಸ್‍ಸಿ ಸಹಾಯಕ ವ್ಯವಸ್ಥಾಪಕ ಮಹಾಬಲರಾಜು, ನಾಗರಾಜು, ಎಂ.ಬಿ. ಕೃಷ್ಣಪ್ಪ ಹಾಗೂ ಎಂಪಿಎಂಸಿಯ ಅಧಿಕಾರಿಗಳು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.

Leave a Comment