ರಾಗಾ- ಕಾಲೆಳೆದ ಮೋದಿ ವಿರುದ್ಧ ಸಿದ್ದು ವಾಗ್ದಾಳಿ

ನವದೆಹಲಿ, ಮಾ. ೪- ವಿದ್ಯಾರ್ಥಿಗಳ ಜೊತೆ ನಡೆಸಿದ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾಲೆಳೆದು ಟೀಕೆಗೆ ಗುರಿಯಾಗಿದ್ದಾರೆ.

ಕಳೆದ ರಾತ್ರಿ ಸ್ಮಾರ್ಟ್ ಇಂಡಿಯಾ ಹ್ಯಾಕಾಥಾನ್‌ನಲ್ಲಿ ನಡೆದ ವಿದ್ಯಾರ್ಥಿಗಳ ಜೊತೆಗಿನ ಸಂವಾದದ ವೇಳೆ ವಿದ್ಯಾರ್ಥಿಯೊಬ್ಬಳು ಓದು,ಬರಹದ ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಮಕ್ಕಳಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ. ತಾರೇ ಜಮೀನ್ ಪರ್ ಸಿನಿಮಾದಲ್ಲಿ ನೋಡಿದಂತೆ ಈ ಮಕ್ಕಳು ಅತ್ಯಂತ ಬುದ್ಧಿವಂತರು, ಸೃಜನಶೀಲರಾಗಿರುತ್ತಾರೆಂದು ಹೇಳಿದ್ದಾಳೆ.

ಆ ವೇಳೆ ಮಧ್ಯೆ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾರ್ಥಿಯನ್ನು ಉದ್ದೇಶಿಸಿ 40-50 ವರ್ಷದ ಮಕ್ಕಳಿಗೂ ಈ ಕಾರ್ಯಕ್ರಮ ಉಪಯೋಗ ಆಗುತ್ತಿದ್ದಯೇ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾಲೆಳೆದರು.

ಪ್ರಧಾನಿ ಉತ್ತರಕ್ಕೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿದರು. ಪ್ರಶ್ನೆ ಕೇಳಿದ ವಿದ್ಯಾರ್ಥಿನಿ `ಆಗುತ್ತೇ ಸರ್` ಎಂದು ಮೋದಿಯವರಿಗೆ ತಕ್ಷಣವೇ ಉತ್ತರಿಸಿದಳು.

ವಿದ್ಯಾರ್ಥಿ ಉತ್ತರದಿಂದ ಇನ್ನಷ್ಟು ಖುಷಿಯಾದ ಪ್ರಧಾನಿ ಮೋದಿಯವರು “ಅಂತಹ ಮಕ್ಕಳ ತಾಯಿಂದಿರಿಗೆ ಖುಷಿಯಾಗಬಹುದು“ ಉತ್ತರಿಸಿದರು.

ಓದು, ಬರಹ ಕಲಿಕೆ ನಿಧಾನಗತಿಯಲ್ಲಿರುವ ಕೆಲ ಮಕ್ಕಳ ಸಮಸ್ಯೆಯನ್ನು ರಾಜಕೀಯಕ್ಕೆ ತಮಾಷೆ ಮಾ‌ಡಿದ ಪ್ರಧಾನಿ ಮೋದಿಯವರ ಹೇಳಿಕೆ ವಿವಾದವನ್ನು ಹುಟ್ಟಿಸಿದೆ.

ವಿದ್ಯಾರ್ಥಿಗಳ ಸಂವಾದದ ವೇಳೆ ಪ್ರಧಾನಿ ನರೇಂದ್ರ ಮೋದಿಯವರು ಅನಗತ್ಯವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕಾಲೆಳೆದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗರಂ ಆಗಿದ್ದಾರೆ.

ವಿದ್ಯಾರ್ಥಿಗಳ ಸಂವಾದದ ಕಾರ್ಯಕ್ರಮವನ್ನು ವೀಕ್ಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳ ಕಲಿಕೆ ಸಮಸ್ಯೆಯನ್ನು ರಾಜಕೀಯಕ್ಕಾಗಿ ತಮಾಷೆ ಮಾಡಿದ ಬಗ್ಗೆ ತಮ್ಮ ಟ್ವೀಟರ್‌ನಲ್ಲಿ ಖಾರವಾಗಿಯೇ ಟೀಕಿಸಿದ್ದಾರೆ.

ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳ ಹೆಸರಿನಲ್ಲಿ ರಾಜಕೀಯ ಬಳಕೆ ಮಾಡಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದು ಟ್ವೀಟರ್‌ನಲ್ಲಿ ಟೀಕಿಸಿದ್ದಾರೆ.

ಕೆಲ ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ನಿಧಾನವಿರಬಹುದು. ಆದರೆ ನಿಮ್ಮಂತೆ ಹೃದಯ ಹೀನರಲ್ಲ. ವಿದ್ಯಾರ್ಥಿಗಳ ಕಲಿಕೆ ಸಮಸ್ಯೆಯನ್ನು ರಾಜಕೀಯಕ್ಕೆ ಬಳಸಿದ ನಿಮಗೆ ನಾಚಿಕೆಯಾಗಬೇಕೆಂದು ಟ್ವೀಟರ್‌ನಲ್ಲಿ ಹೇಳಿದ್ದಾರೆ.

ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಇದರ ಬಗ್ಗೆ ಟ್ವೀಟ್ ಮಾಡಿದ್ದು ಪ್ರಧಾನಿ ಮೋದಿ ನರೇಂದ್ರ ಮೋದಿಯವರು ವಿದ್ಯಾರ್ಥಿಗಳ ಸಂವಾದದ ವೇಳೆ ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನು ಪ್ರಸ್ತಾಪಿಸಿದ್ದಾರೆ. ಮೋದಿಯವರು ಅತ್ಯಂತ ಕೆಟ್ಟ ಪ್ರಧಾನಿ ಎಂದು ಟೀಕಿಸಿದ್ದಾರೆ.

Leave a Comment