ರಾಂಚಿ ಟೆಸ್ಟ್: ಕ್ಲೀನ್ ಸ್ವೀಪ್ ಸಾಧನೆಯತ್ತ ಟೀಮ್ ಇಂಡಿಯಾ ಚಿತ್ತ

ರಾಂಚಿ, ಅ. 18 – ತವರಿನಲ್ಲಿ ಭರ್ಜರಿ ಲಯದಲ್ಲಿರುವ ಟೀಮ್ ಇಂಡಿಯಾ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿರುವ ಮೂರು ಪಂದ್ಯಗಳ ಸರಣಿಯ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದ್ದು, ಕ್ಲೀನ್ ಸ್ವೀಪ್ ಸಾಧನೆಯತ್ತ ಚಿತ್ತ ನೆಟ್ಟಿದೆ.

ಬ್ಯಾಟಿಂಗ್, ಬೌಲಿಂಗ್ ನಲ್ಲಿ ಸೊಗಸಾದ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಶ್ರಮಿಸುತ್ತಿರುವ ಟೀಮ್ ಇಂಡಿಯಾದ ಆಟಗಾರರು ವಿಶ್ರಾಂತಿ ಬಳಿಕ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈಗಾಗಲೇ ಮೂರು ಸರಣಿಯ ಪಂದ್ಯದಲ್ಲಿ 2-0 ಯಿಂದ ಮುನ್ನಡೆ ಸಾಧಿಸಿರುವ ಆತಿಥೇಯ ತಂಡ, ಸಾಧನೆ ಮಾಡಿದೆ. ಈ ಪಂದ್ಯ ಗೆದ್ದು ಬೀಗುವ ಕನಸು ವಿರಾಟ್ ಪಡೆಯದ್ದಾಗಿದೆ.

ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾದ ಮೇಲ್ಪಂಕ್ತಿಯ ಆಟಗಾರರು ರನ್ ಕಲೆ ಹಾಕುತ್ತಿದ್ದು ತಂಡದ ಚಿಂತೆ ದೂರ ಮಾಡಿದೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ  ಬಳಸಿಕೊಂಡಿರುವ ಕರ್ನಾಟಕದ ಸ್ಟಾರ್ ಆಟಗಾರ ಮಾಯಾಂಕ್ ಅಗರ್ ವಾಲ್ ಎಲ್ಲರ ಚಿತ್ತ ಕದ್ದಿದ್ದಾರೆ. ಈ ಸರಣಿಯಲ್ಲಿ ಎರಡೂ ಪಂದ್ಯಗಳಲ್ಲಿ ಶತಕ ದಾಖಲಿಸಿರುವ ಮಾಯಾಂಕ್ 330 ರನ್ ಕಲೆ ಹಾಕಿದ್ದಾರೆ.

ಇನ್ನು ಟೆಸ್ಟ್ ನಲ್ಲಿ ಆರಂಭಿಕರಾಗಿ ಇದೇ ಮೊದಲ ಸರಣಿಯಲ್ಲಿ ಕಣಕ್ಕೆ ಇಳಿದಿರುವ ರೋಹಿತ್ ಶರ್ಮಾ ತಮ್ಮ ಮೇಲೆ ಇದ್ದ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದ್ದಾರೆ. ಇವರು 317 ರನ್ ಸೇರಿಸಿ ಅಬ್ಬರಿಸಿದ್ದಾರೆ. ಎರಡನೇ ಪಂದ್ಯದಲ್ಲಿ ಧಮಾಕೆದಾರ್ ಪ್ರದರ್ಶನ ನೀಡಿ ದ್ವೀಶತಕ ಬಾರಿಸಿರುವ ವಿರಾಟ್ ಕೊಹ್ಲಿ ನಂಬರ್ 1 ಸ್ಥಾನಕ್ಕೆ ಮತ್ತೇ ಏರಲು ಪ್ಲಾನ್ ಮಾಡಿಕೊಂಡಿದ್ದಾರೆ.

ಆಲ್ ರೌಂಡರ್ ರವೀಂದ್ರ ಜಡೇಜಾ ರನ್ ಕಲೆ ಹಾಕಿ ಆರ್ಭಟಿಸಿದ್ದಾರೆ. ಇನ್ನು ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಸ್ಥಿರ ಪ್ರದರ್ಶನ ನೀಡಬಲ್ಲರು.

ವಿರಾಟ್ ಪಡೆಯ ಬೌಲಿಂಗ್ ಸೊಗಸಾಗಿದೆ. ಆರ್.ಅಶ್ವಿನ್ 14 ಹಾಗೂ ರವೀಂದ್ರ ಜಡೇಜಾ 10 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ವೇಗಿಗಳಾದ ಶಮಿ 8 ಮತ್ತು ಉಮೇಶ್ ಯಾದವ್ 6 ವಿಕೆಟ್ ಕಿತ್ತಿದ್ದಾರೆ. ಇಶಾಂತ್ ಶರ್ಮಾ ಲಯ ಬದ್ಧ ಬೌಲಿಂಗ್ ನಡೆಸುತ್ತಾ ಇದ್ದರೂ ವಿಕೆಟ್ ಬೇಟೆಯಲ್ಲಿ ಹಿನ್ನಡೆ ಅನುಭವಿಸುತ್ತಾ ಇದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೇತೋಹಾರಿ ಪ್ರದರ್ಶನ ನೀಡಿ, ಗೆಲುವು ಸಾಧಿಸಲು ಯೋಜನೆ ರೂಪಿಸಿಕೊಂಡಿದೆ. ಟೀಮ್ ಇಂಡಿಯಾದ ಬೌಲರ್ ಗಳನ್ನು ಕಾಡಿರುವ ಡೀನ್ ಎಲ್ಗರ್ ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ತುಂಬಲಾರದ ನಷ್ಟವಾಗಿದೆ. ಅನುಭವಿ ಕ್ವಿಂಟನ್ ಡಿಕಾಕ್ ಹಾಗೂ ಫಾಫ್ ಡುಪ್ಲೆಸಿಸ್ ಅವರ ಮೇಲೆ ಬ್ಯಾಟಿಂಗ್ ಜವಾಬ್ದಾರಿ ನಿಂತಿದೆ.

ಸ್ಪಿನ್ ವಿಭಾಗದಲ್ಲಿ ಕೇಶವ್ ಮಹಾರಾಜ್ ಹಾಗೂ ಮುತ್ತುಸ್ವಾಮಿ ವಿಕೆಟ್ ಪಡೆಯುತ್ತಾ ಇದ್ದರೂ ರನ್ ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗುತ್ತಾ ಇದ್ದಾರೆ. ಫಿಲೆಂಡರ್, ಕಗಿಸೊ ರಬಾಡ ವೇಗದ ನೊಗವನ್ನು ಹೊತ್ತು ಕೊಳ್ಳಲಿದ್ದಾರೆ.

ಸ್ಥಳ: ರಾಂಚಿ

ಸಮಯ: ಬೆಳಗ್ಗೆ 9ಕ್ಕೆ

 

Leave a Comment