ರಸ್ತೆ ಹಂಪ್‌ಗಳು: ಅಪಘಾತಕ್ಕೆ ಆಹ್ವಾನ ಸಾವು ನೋವು ಕರ್ನಾಟಕ ನಂ. 1

ನವದೆಹಲಿ, ಜೂ. ೧೯ – ವಾಹನಗಳ ವೇಗ ನಿಯಂತ್ರಿಸಲು ನಿರ್ಮಿಸಿರುವ ರಸ್ತೆ ಉಬ್ಬುಗಳು (ಹಂಪ್) ಜೀವಕ್ಕೆ ಕುತ್ತು ತರುತ್ತಿವೆ. ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿರುವ ಹಂಪ್‌ಗಳಿಂದ ದೇಶದಲ್ಲಿ ಅಪಘಾತಗಳು ಸಂಭವಿಸಿ ಕನಿಷ್ಠ 9 ಮಂದಿ ಮೃತಪಡುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ರಸ್ತೆ ಉಬ್ಬುಗಳಿಂದ ಆಗುವ ಅಪಘಾತಗಳ ಸಾವು-ನೋವಿನ ಸಂಖ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವುದು ಆತಂಕಕಾರಿ ಸಂಗತಿಯಾಗಿದೆ.
ಹಂಪ್‌ಗಳಿಂದ ಸಣ್ಣಪುಟ್ಟ ಗಾಯಗೊಳ್ಳುವವರನ್ನು ಹೊರತುಪಡಿಸಿ ಗಂಭೀರವಾಗಿ ಗಾಯಗೊಳ್ಳುವವರೆ 30ಕ್ಕೂ ಹೆಚ್ಚು ಮಂದಿ ಇರುವುದನ್ನು ರಾಷ್ಟ್ರೀಯ ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿರುವ ಅಂಶಗಳಿಂದ ಬೆಳಕಿಗೆ ಬಂದಿದೆ.
ರಸ್ತೆ ಅಪಘಾತಗಳನ್ನು ತಡೆಯಲು ಎಷ್ಟೇ ಯೋಜನೆಗಳನ್ನು ಹಮ್ಮಿಕೊಂಡಿದ್ದರೂ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಾಣುತ್ತಿಲ್ಲ. ರಸ್ತೆಗಳಲ್ಲಿನ ರಸ್ತೆ ಉಬ್ಬುಗಳಿಂದಾಗುತ್ತಿರುವ ಅಪಘಾತಗಳ ಸಂಖ್ಯೆಯಲ್ಲೂ ಕಡಿಮೆಯಾಗಿಲ್ಲ.
ಸಾರಿಗೆ ಇಲಾಖೆ ನಡೆಸಿದ ಅಪಘಾತ ಪ್ರಕರಣಗಳ ದಾಖಲೆಗಳ ಪ್ರಕಾರ 2015 ರಲ್ಲಿ ದೇಶದಲ್ಲಿ 3,409 ಮಂದಿ ರಸ್ತೆ ಉಬ್ಬುಗಳ ಅಪಘಾತಕ್ಕೆ ಬಲಿಯಾಗಿದ್ದಾರೆ. ಇದನ್ನು ಆಸ್ಟ್ರೇಲಿಯಾ ಮತ್ತು ಯೂರೋಪಿಯನ್ ರಾಷ್ಟ್ರಗಳಲ್ಲಿ ರಸ್ತೆ ಅಪಘಾತಕ್ಕೆ ಹೋಲಿಸಿದರೆ ಅಲ್ಲಿ ಈ ವರ್ಷ ಬಲಿಯಾದವರು 2937 ಮಂದಿಯಾಗಿದ್ದಾರೆ.
ಬೇರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲೇ ಅತಿ ಹೆಚ್ಚು ರಸ್ತೆ ಉಬ್ಬು ಸಂಬಂಧಿತ ಅಪಘಾತಗಳು ನಡೆಯುತ್ತಿವೆ. ಇನ್ನೂ ಸರ್ಕಾರ ಕಳೆದ ವರ್ಷಕ್ಕೆ ಸಂಬಂಧಿಸಿದ ಅಪಘಾತಗಳ ದಾಖಲೆಗಳನ್ನು ಬಿಡುಗಡೆಗೊಳಿಸಿಲ್ಲ.
ತಜ್ಞರ ಅಭಿಪ್ರಾಯಗಳ ಪ್ರಕಾರ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ರಸ್ತೆಗಳು ದೋಷಮುಕ್ತ, ವಿನ್ಯಾಸ, ಕಳಪೆ ಕಾಮಗಾರಿ ಮತ್ತು ಪ್ರಮುಖವಾಗಿ ರಸ್ತೆ ಉಬ್ಬುಗಳು ಕಾಣುವಂತ ಗುರುತುಗಳ ಕೊರತೆ ಅಪಘಾತಗಳಿಗೆ ಪ್ರಮುಖವಾದ ಕಾರಣವಾಗಿದೆ. ಪ್ರತಿ ರಸ್ತೆಯಲ್ಲಿರುವ ರಸ್ತೆ ಉಬ್ಬುಗಳು ನಮ್ಮ ಮೂಳೆಗಳ ಮುರಿಯಲು ಹಾಗೂ ನಮ್ಮ ವಾಹನಗಳನ್ನು ಹಾನಿಗೊಳಿಸಲು ನಿರ್ಮಿಸಿದಂತೆ ಇದೆ ಎನ್ನುವ ಆರೋಪ ಕೇಳಿಬಂದಿದೆ.
ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ 100 ಮೀಟರ್‌ಗೆ ಒಂದು ರಸ್ತೆ ಉಬ್ಬುಗಳನ್ನು ಕಾಣಬಹುದು. ಅದು ಹೆಚ್ಚಾಗಿ ಸ್ಥಳೀಯ ನಾಯಕರ ಮನೆ ಮುಂದೆ. ಜನ ಸಂಚಾರ ಹೆಚ್ಚಿರುವ ಕಡೆ ವಿಶೇಷವಾಗಿ ಕಾಣಬಹುದು.
ಸಾರಿಗೆ ಇಲಾಖೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾತ್ರ ರಸ್ತೆ ಉಬ್ಬುಗಳನ್ನು ನಿರ್ಮಿಸದಿರಲು ಸೂಚಿಸಿದ್ದು, ರಾಜ್ಯ ರಸ್ತೆಗಳಲ್ಲಿ ರಸ್ತೆ ಉಬ್ಬುಗಳ ನಿರ್ಮಿಸುವ ವಿಚಾರ ಜನರ ಸುರಕ್ಷತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.
ವಿಶ್ವ ಬ್ಯಾಂಕಿಂಗ್ ರಸ್ತೆ ಸುರಕ್ಷತಾ ಸಮಾಲೋಚಕ ಎ.ಪಿ. ಬಹದ್ದೂರ್ ಅವರು ತಿಳಿಸಿರುವಂತೆ ಕೆಟ್ಟ ರಸ್ತೆಗಳ ಮಧ್ಯೆ ರಸ್ತೆ ಉಬ್ಬುಗಳನ್ನು ನಿರ್ಮಿಸುವುದು ಅಪಾಯಕಾರಿ. ರಸ್ತೆ ಉಬ್ಬುಗಳಿರುವ ರಸ್ತೆ ಅಕ್ಕ-ಪಕ್ಕದಲ್ಲಿ ಥರ್ಮೋಪ್ಲಾಸ್ಟಿಕ್ ಪದರಗಳನ್ನು ಬಳಸಲು ಸಲಹೆ ನೀಡುತ್ತಾರೆ. ಅಲ್ಲದೆ, ರಸ್ತೆ ಉಬ್ಬು ಮುಂಭಾಗ ದಪ್ಪದಾಗಿ ಗುರುತುಗಳಿರಬೇಕು. ಎಚ್ಚರಿಕೆಯ ಸಂಕೇತಗಳು ಇರಬೇಕು.
ಇತ್ತೀಚಿನ ವರ್ಷಗಳಲ್ಲಿ ರಸ್ತೆ ಅಪಘಾತಗಳಿಂದ ಸಾವುಗಳ ಸಂಭವಿಸಲು ಅತಿದೊಡ್ಡ ಕಾರಣ ಎಂದು ಗುರುತಿಸಲ್ಪಟ್ಟಿರುವುದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗಿದೆ.

Leave a Comment