ರಸ್ತೆ ಸೇರುತ್ತಿರುವ ಮೀನಿನ ನೀರು ಬೈಕ್ ಸವಾರರಿಗೆ ತಪ್ಪದ ಕಿರಿಕಿರಿ

ಮಂಗಳೂರು, ಫೆ.೧೭- ನಗರಕ್ಕೆ ಮೀನು ಸಾಗಾಟ ಮಾಡುವ ಲಾರಿಗಳಿಂದ ಕೊಳೆತ ಮೀನಿನ ನೀರನ್ನು ರಸ್ತೆಗೆ ಬಿಡುತ್ತಿರುವ ಘಟನೆ ಪ್ರತಿನಿತ್ಯ ಜರುಗುತ್ತಲೇ ಇದೆ. ಆದರೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿಲ್ಲ. ಇದರಿಂದ ಲಾರಿಗಳ ಹಿಂಬದಿಯಲ್ಲಿ ಸಂಚರಿಸುವ ದ್ವಿಚಕ್ರ ಚಾಲಕರ ಪಾಡು ಮಾತ್ರ ಹೇಳತೀರದು. ಕೊಳೆತು ದುರ್ವಾಸನೆ ಬೀರುವ ಮೀನಿನ ನೀರು ದ್ವಿಚಕ್ರ ಸವಾರರಿಗೆ ಅಭಿಷೇಕ ಮಾಡುವುದಲ್ಲದೆ ರಸ್ತೆ ಪೂರ್ತಿ ದುರ್ವಾಸನೆ ಬೀರುತ್ತದೆ.

ಸಾಮಾನ್ಯವಾಗಿ ಮುಂಜಾನೆ ಮತ್ತು ಸಂಜೆಯ ವೇಳೆ ಗೋವಾ, ಮಲ್ಪೆಯಿಂದ ಮೀನು ಸಾಗಾಟ ಮಾಡುವ ಲಾರಿಗಳು ನಗರವನ್ನು ಪ್ರವೇಶಿಸುತ್ತವೆ. ಸ್ಥಳೀಯ ಲಾರಿಗಳು ಕೊಟ್ಟಾರ ಚೌಕಿಯಿಂದ ತಿರುವು ಪಡೆದು ನಗರದ ಒಳಭಾಗವನ್ನು ಪ್ರವೇಶಿಸಿದರೆ ಅಂತಾರಾಜ್ಯ ಪರ್ಮಿಟ್ ಪಡೆದಿರುವ ಲಾರಿಗಳು ಹೆದ್ದಾರಿಯಲ್ಲೇ ಸಾಗುತ್ತವೆ. ಈ ಲಾರಿಗಳಲ್ಲಿ ಮೀನಿನ ನೀರು ಸಂಗ್ರಹಿಸಲು ತಳಭಾಗದಲ್ಲಿ ಟ್ಯಾಂಕ್ ಅಳವಡಿಸಿದ್ದರೂ ಪೈಪ್ ಅನ್ನು ಅದರಿಂದ ಹೊರತೆಗೆದು ರಸ್ತೆಗೆ ಕೊಳೆತ ನೀರನ್ನು ಬಿಡಲಾಗುತ್ತದೆ. ಈ ಬಗ್ಗೆ ಸಂಚಾರಿ ಠಾಣಾ ಪೊಲೀಸರು ಕೆಲವೊಂದು ನಿಯಮಾವಳಿಗಳನ್ನು ರೂಪಿಸಿದ್ದರೂ ಅದರ ಪಾಲನೆಯಾಗುವುದು ಮಾತ್ರ ಕಾಣಿಸುತ್ತಿಲ್ಲ.

ರಾ.ಹೆ.೬೬ರಲ್ಲಿ ಉಡುಪಿಯಿಂದ ಮಂಗಳೂರಿನವರೆಗೂ ಈ ಘಟನಾವಳಿ ನಿತ್ಯ ನಿರಂತರ ನಡೆಯುತ್ತಲೇ ಇದೆ. ಮೀನು ಸಾಗಾಟದ ಲಾರಿಗಳು ಜಿಲ್ಲಾಡಳಿತದ ನಿಯಮಾವಳಿಗೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. ರಸ್ತೆಗೆ ನೀರನ್ನು ಬಿಡುವುದರಿಂದ ವಾಸನೆಯಿಂದ ಮೂಗು ಮುಚ್ಚಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕೆಲವಾರಗಳ ಹಿಂದೆ ಇಂಥ ಲಾರಿಗಳನ್ನು ತಡೆದು ದಂಡ ವಿಧಿಸಲಾಗುತ್ತಿತ್ತು. ಆದರೆ ಇದೀಗ ಮತ್ತೆ ಯಥಾಸ್ಥಿತಿ ಮುಂದುವರಿದಿದ್ದು ಇನ್ನಾದರೂ ಸಂಬಂಧಪಟ್ಟ ಜಿಲ್ಲಾಡಳಿತ, ಸಂಚಾರಿ ಠಾಣಾ ಪೊಲೀಸರು ಇಂಥ ಲಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಅನಿವಾರ್ಯತೆಯಿದೆ.

Leave a Comment