ರಸ್ತೆ ಸುರಕ್ಷತೆ ಕುರಿತು ಎರಡು ದಿನಗಳ ಒಳಗಾಗಿ ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಿ: ನಗರ ಜಿಲ್ಲಾಧಿಕಾರಿ ಸೂಚನೆ

ಬೆಂಗಳೂರು, ಸೆ 23. ಎರಡು ದಿನಗಳೊಳಗಾಗಿ ಜಿಲ್ಲೆಯ ಇಲಾಖಾವಾರು ರಸ್ತೆ ಸುರಕ್ಷತಾ ಕ್ರಿಯಾ ಯೋಜನೆ ಕರುಡು ಸಿದ್ಧಪಡಿಸಿ ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ ಸಿದ್ಧಪಡಿಸಿರುವ ಜಿಲ್ಲಾ ರಸ್ತೆ ಸುರಕ್ಷತಾ ಕರಡು ಕ್ರಿಯಾ ಯೋಜನೆಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡುವ ಕುರಿತು ಚರ್ಚಿಸಲು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯನ್ನು ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಸಿದ್ಧಪಡಿಸಿ, ಪಾಲುದಾರಿಕೆ ಇಲಾಖೆಗಳು 2 ದಿನಗಳಲ್ಲಿ ಅಗತ್ಯವಿರುವ ಅನುದಾನದ ಬಗ್ಗೆ ಮಾಹಿತಿ ನೀಡಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದರು.

ಸಾರಿಗೆ ಉಪ ಆಯುಕ್ತರಾದ ಪ್ರಭುಸ್ವಾಮಿ ಮಾತನಾಡಿ,  ಕ್ರಿಯಾ ಯೋಜನೆ ಕರಡು ಬಗ್ಗೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ಕೈಗೊಳ್ಳಬೇಕಾದ ಹಲವಾರು ಚಟುವಟಿಕೆಗಳ ಪಟ್ಟಿ ಮಾಡಲಾಗಿದ್ದು, ಇದರ  ಅನುಷ್ಠಾನಕ್ಕಾಗಿ ಆಯಾ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು ಸೂಕ್ತ ಆಯವ್ಯಯದ ಅಂದಾಜು ಪಟ್ಟಿಯನ್ನು ತಯಾರಿಸಿ ಸಲ್ಲಿಸಬೇಕು ಎಂದರು.

ಸೆಪ್ಟೆಂಬರ್ 25ರೊಳಗೆ ರಸ್ತೆ ಸುರಕ್ಷತಾ ಪ್ರಾಧಿಕಾರ ಜಿಲ್ಲೆಯ ಆಯವ್ಯಯ ಸಹಿತ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದ್ದು, ಈ ಸಂಬಂಧ ಸಭಯಲ್ಲಿ  ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಆಡಳಿತ ಮತ್ತು ಮುಂದಾಳತ್ವ, ಜಿಲ್ಲೆಯಲ್ಲಿ ಆಗುತ್ತಿರುವ ರಸ್ತೆ ಅಪಘಾತ ವಿಶ್ಲೇಷಣೆ, ಸಾರ್ವಜನಿಕರಲ್ಲಿ ರಸ್ತೆ  ಸುರಕ್ಷತೆ ಬಗ್ಗೆ ಅರಿವು ಮೂಡಿಸುವುದು, ಅಪಘಾತ ಮತ್ತು ತುರ್ತು ಚಿಕಿತ್ಸೆ, ರಸ್ತೆ ಸುರಕ್ಷತೆ ಕುರಿತು ಅನುಷ್ಠಾನ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡುವುದು ಸೇರಿದಂತೆ ಮೇಲ್ವಿಚಾರಣೆ ಪರಿಶೀಲನೆ ಹಾಗೂ ನಿರಂತರ ಮೌಲ್ಯಮಾಪನ ನಡೆಸುವ ಬಗ್ಗೆ ಕುಲಂಕುಶವಾಗಿ ಕ್ರಿಯಾ ಯೋಜನೆಯಲ್ಲಿ ತಿಳಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಎರಡು ದಿನಗಳೊಳಗಾಗಿ ಸಲ್ಲಿಸಿದಲ್ಲಿ ಕ್ರಿಯಾ ಯೋಜನೆ ಕರಡು ಸಿದ್ಧಪಡಿಸಲು ಅನುಕೂಲಕರವಾಗಲಿದೆ ಎಂದು ತಿಳಿಸಿದರು.

ಸಂಚಾರ ನಗರ ಪೊಲೀಸ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕವಿತಾ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ನಿಗಮ, ವೈದ್ಯಕೀಯ ಶಿಕ್ಷಣ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Comment