ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ: ಓರ್ವ ಸಾವು

ಮಂಗಳೂರು, ಫೆ.೧೨- ನಗರದ ಹೊರವಲಯ ಕಣ್ಣೂರು- ಅಡ್ಯಾರ್‌ಕಟ್ಟೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗುರುಪುರ ನಿವಾಸಿ ಮುಹಮ್ಮದ್ ಹಫೀಝ್ (೨೦) ಮೃತ ಯುವಕ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಇನ್ನೋರ್ವ ಯುವಕ ಮುಹಮ್ಮದ್ ಸಾವತ್ (೩೩) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರು ದಾರುನ್ನೂರ್ ತಬೂಕ್ ಘಟಕದ ಕಾರ್ಯಕರ್ತ ಅನ್ವರ್ ವಳಚ್ಚಿಲ್ ಅವರ ಚಿಕ್ಕಪ್ಪ ದಿ. ಅಬ್ದುಲ್ ಲತೀಫ್ ಅವರ ಪುತ್ರ. ನಿನ್ನೆ ಬೆಳಗ್ಗೆ ಗಾಯಾಳು ಮುಹಮ್ಮದ್ ಸಾವತ್ ಚಲಾಯಿಸಿಕೊಂಡು ಬರುತ್ತಿದ್ದ ಬೈಕ್‌ನಲ್ಲಿ ಮುಹಮ್ಮದ್ ಹಫೀಝ್ ಹಿಂಬದಿ ಸವಾರನಾಗಿದ್ದರು. ಕಣ್ಣೂರಿನಿಂದ ಮಂಗಳೂರಿನ ಕೇಂದ್ರ ಮಾರುಕಟ್ಟೆಗೆ ಕೆಲಸಕ್ಕೆಂದು ಯುವಕರು ಬರುತ್ತಿದ್ದರು. ಈ ವೇಳೆ ಅಡ್ಯಾರ್‌ಕಟ್ಟೆ ಸಮೀಪದ ರಸ್ತೆಯ ವಿಭಜಕಕ್ಕೆ ನಿಯಂತ್ರಣ ತಪ್ಪಿದ ಬೈಕ್ ಢಿಕ್ಕಿಯಾಗಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟ ಹಿಂಬದಿ ಸವಾರ ಮುಹಮ್ಮದ್ ಹಫೀಝ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಸವಾರ ಮುಹಮ್ಮದ್ ಸಾವತ್‌ನಿಗೂ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಹಮ್ಮದ್ ಹಫೀಝ್ ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಮುಹಮ್ಮದ್ ಹಫೀಝ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಹಲವು ಮಂದಿ ಆಸ್ಪತ್ರೆಯ ಮುಂದೆ ಸೇರಿದ್ದು, ಯುವಕ ಮೃತಪಟ್ಟ ಬಳಿಕ ಜನಜಂಗುಳಿ ಇನ್ನಷ್ಟು ಹೆಚ್ಚಿತ್ತು.

Leave a Comment