ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನದ ಸ್ಪಷ್ಟ ಮಾಹಿತಿ ನೀಡದೆ ಹೆದ್ದಾರಿ ಅಧಿಕಾರಿಗಳು

ಹುಳಿಯಾರು, ಸೆ. ೧೦-  ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ಕ್ಕೆ ಸಂಬಂಧಿಸಿದಂತೆ ಮಾಡಿಕೊಂಡಿರುವ ಭೂಸ್ವಾಧೀನ ಹಾಗೂ ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಪ್ರಾಜೆಕ್ಟ್ ರಿಪೋರ್ಟ್‌ನಲ್ಲಿರುವಂತೆ ಅನುಸರಿಸದೆ ತಮಗೆ ಬೇಕಾದಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಸಾರ್ವಜನಿಕರು ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ಉಡಾಫೆ ಉತ್ತರ ನೀಡಿದ ಹೆದ್ದಾರಿ ಇಂಜಿನಿಯರ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿ ಸ್ಪಷ್ಟ ಮಾಹಿತಿ ನೀಡುವವರಿಗೆ ಕೆಲಸ ಪ್ರಾರಂಭ ಮಾಡಬೇಡಿ ಎಂದು ಪಟ್ಟು ಹಿಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 234 ಕ್ಕೆ ಸಂಬಂಧಿಸಿದಂತೆ ಹುಳಿಯಾರಿನಿಂದ ಸಿರಾದವರೆಗೆ ಹೆದ್ದಾರಿ ಕಾರ್ಯ ನಡೆಯುತ್ತಿದ್ದು, ಇದೀಗ ಹುಳಿಯಾರು ಪಟ್ಟಣದಲ್ಲಿ ಕೆಲಸ ಆರಂಭಿಸಲು ಮುಂದಾದಾಗ ರಸ್ತೆ ಮಾರ್ಜಿನ್ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಈ ಹಿಂದೆ ರಸ್ತೆ ಮಧ್ಯಭಾಗದಿಂದ ಎರಡೂ ಬದಿಯಲ್ಲೂ 18 ಮೀಟರ್ ಅಗಲಕ್ಕೆ ಸರ್ವೆ ಕಾರ್ಯ ನಡೆಸಿ ರಸ್ತೆ ಅಗಲೀಕರಣದ ಪರಿಧಿಯೊಳಗೆ ಒಳಪಡುವ ಮನೆಗಳು, ಬಿಲ್ಡಿಂಗ್ ಸೆಟ್‌ಬ್ಯಾಕ್, ಅತಿಕ್ರಮಣ ತೆರವು ಹೀಗೆ ಎಲ್ಲದರ ಬಗ್ಗೆ  ಸಾರ್ವಜನಿಕರೊಂದಿಗೆ ಚರ್ಚಿಸಿ ಮುಂದುವರೆಯುವುದಾಗಿ ಹೇಳಿದ್ದ ಅಧಿಕಾರಿಗಳು ಇದೀಗ ರೋಡ್ ಮಾರ್ಜಿನ್ ಒಳಗೆ ಒಳಪಡುವ ಕಟ್ಟಡಗಳ ತೆರವುಗೊಳಿಸುವ ಗೋಜೆ ಬೇಡವೆಂದು ನಿರ್ಧರಿಸಿ ಏಕಾಏಕಿ ಮೂರು ಮೀಟರ್ ಅಗಲವನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದು ಆ ರೀತಿಯಂತೆ ಕೆಲಸ ಮಾಡಲು ಮುಂದಾಗಿದ್ದರ ಬಗ್ಗೆ ಮಾಹಿತಿ ಕೇಳಿದಾಗ ಹಾರಿಕೆ ಉತ್ತರ ನೀಡಿದ್ದಾರೆ.

ರಸ್ತೆ ಎರಡೂ ಬದಿಯಲ್ಲೂ ಚರಂಡಿ ನಿರ್ಮಾಣ ಮಾಡುವ ವೇಳೆ ನಿಯಮ ಪಾಲಿಸದೆ ಯಾರೋ ದುಡ್ಡಿದ್ದವರನ್ನು ಸಂತೃಪ್ತಗೊಳಿಸಲು ಮುಂದಾಗಿ ರಸ್ತೆ ಚರಂಡಿಯ ಮಾರ್ಗವನ್ನೆ ಬದಲಿಸಿ ಇದೇ ಸರಿಯಾದ ರಸ್ತೆ ಎಂದು ವಾದಿಸಲು ಮುಂದಾಗಿದ್ದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ನೀವು ಯಾರಿಗೋ ಅನುಕೂಲ ಕಲ್ಪಿಸಲು ಹೋಗಿ ಬಡ ರೈತರ ಹೊಟ್ಟೆಗೆ ಹೊಡೆಯಬೇಡಿ. ನಿಯಮಾವಳಿಯಂತೆ ಕೆಲಸ ಮಾಡಿ. ರಸ್ತೆ ಮಧ್ಯ ಭಾಗದಿಂದ ನಿಮ್ಮ ಪ್ರಾಜೆಕ್ಟ್ ರಿಪೋರ್ಟ್‌ನಲ್ಲಿ ಎಷ್ಟಿದೆಯೋ ಅದೇ ರೀತಿ ಕೆಲಸ ನಿರ್ವಹಿಸಿ. ಇಲ್ಲದಿದ್ದಲ್ಲಿ ನೀವು ಕೆಲಸ ಮಾಡುವುದೇ ಬೇಡ. ಶಾಸಕರು ಹಾಗೂ ಮೇಲಾಧಿಕಾರಿಗಳು ಬಂದು ಇತ್ಯರ್ಥ ಮಾಡಿದ ನಂತರ ಮುಂದುವರೆಯಿರಿ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ತುಮಕೂರು ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹರೀಶ್, ಡಿಆರ್‍ಎನ್ ಇನ್ಪ್ರಾ ಸಂಸ್ಥೆಯ ಮಿಲನ್ ರೆಡ್ಡಿ, ತೋಟದ ಮನೆ ಚಿದಾನಂದ್, ಶೇಖರ್, ಜಯಣ್ಣ, ಬರಕನಾಳ ಕುಮಾರ್, ಷಡಾಕ್ಷರಿ, ಗೇಟ್ ರುದ್ರಪ್ಪ, ಶಿವಕುಮಾರ್, ಶಾಮಿಯಾನ ಚಂಬಣ್ಣ, ಎಂಎಸ್ ಬದರೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment