ರಸ್ತೆ ಡಾಂಬರೀಕರಣ ಪೂರ್ಣಗೊಳಿಸಲು ಆಗ್ರಹ

ಹುಳಿಯಾರು, ಫೆ. ೧೩- ಅರ್ಧಕ್ಕೆ ನಿಂತಿರುವ ರಸ್ತೆ ಡಾಂಬರೀಕರಣವನ್ನು ಪೂರ್ಣಗೊಳಿಸಿ ಸಂಗೇನಹಳ್ಳಿ ಗ್ರಾಮಸ್ಥರಿಗೆ ಧೂಳಿನಿಂದ ಮುಕ್ತಿ ಕೊಡಿ ಎಂದು ಹುಳಿಯಾರು ಹೋಬಳಿ ಸಂಗೇನಹಳ್ಳಿ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.

ಚಿಕ್ಕಬಿದರೆ ಗ್ರಾಮದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮೀಣ ರಸ್ತೆಯಾಗಿ ಸಂಗೇನಹಳ್ಳಿ ಮಾರ್ಗವಾಗಿ ಅಣೇಪಾಳ್ಯ, ಕಂದಿಕೆರೆಗೆ ರಸ್ತೆ ಮಾಡಲಾಗಿದೆ. ಆದರೆ ಈ ರಸ್ತೆ ಡಾಂಬರೀಕರಣ ಮಾಡಿ 10-15 ವರ್ಷಗಳಾಗಿದೆ. ಅದೂ 4 ಕಿ.ಮೀ. ದೂರದಲ್ಲಿ ಕೇವಲ 3 ಕಿ.ಮೀ ಮಾಡಿ ಇನ್ನೊಂದು ಕಿ.ಮೀ. ಡಾಂಬರೀಕರಣ ಮಾಡದೆ 15 ವರ್ಷಗಳಿಂದ ಹಾಗೆಯೇ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂಗೇನಹಳ್ಳಿ ಊರೊಳಗೆ ಬರುವ ಭಾಗವಾದ ಈ ಒಂದು ಕಿ.ಮೀ. ರಸ್ತೆಯನ್ನು ಡಾಂಬರೀಕರಣ ಮಾಡದೆ ಕೇವಲ ಜಲ್ಲಿ ಹರಡಿ ಬಿಟ್ಟು ಹೋಗಿದ್ದಾರೆ. ಪರಿಣಾಮ ರಸ್ತೆಯ ಅಕ್ಕಪಕ್ಕ ಇರುವ 20ಕ್ಕೂ ಹೆಚ್ಚು ಮನೆಗಳಿಗೆ ವಾಹನಗಳು ಓಡಾಡುವಾಗ ಧೂಳು ಆವರಿಸುತ್ತದೆ. ಪರಿಣಾಮ ಅಡಿಗೆ ಪದಾರ್ಥ, ನೀರು, ಬಟ್ಟೆಗಳಿಗೆ ಧೂಳು ಬಿದ್ದು ಭಾರಿ ತೊಂದರೆಯಾಗುತ್ತಿದೆ. ಅಲ್ಲದೆ ಮಳೆ ಬಂದಾಗಲಂತೂ ಮನೆಯ ಮುಂದೆ ಕೆಸರು ಗದ್ದೆಯಾಗುತ್ತದೆ ಎಂದು ಸಮಸ್ಯೆ ವಿವರಿಸಿದ್ದಾರೆ.

ಈ ರಸ್ತೆಯ ಮೂಲಕ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಓಡಾಡುತ್ತಾರೆ. ಬರೀ ಜಲ್ಲಿ ರಸ್ತೆಯಾಗಿರುವುದರಿಂದ ಸುಗಮ ಸಂಚಾರಕ್ಕೆ ತೊಡಕಾಗಿ ಸೈಕಲ್‌ನಿಂದ ಬೀಳುವುದು ಸೈಕಲ್ ಪಂಚರ್ ಆಗುವುದು ಸಾಮಾನ್ಯವಾಗಿ ಬಿಟ್ಟಿದೆ. ರಸ್ತೆ ಹದಗೆಟ್ಟಿರುವುದರಿಂದ ಬಸ್ ಸಹ ಓಡಾಡದೆ ಈ ಭಾಗದ ಜನ ಚಿಕ್ಕಬಿದರೆಗೆ ನಡೆದುಕೊಂಡು ಬಂದು ಅಲ್ಲಿನ ಪಟ್ಟಣ ಪ್ರದೇಶಗಳಿಗೆ ವ್ಯಾಪಾರ-ವಹಿವಾಟಿಗೆ ಹೋಗಬೇಕಿದೆ ಎಂದು ವಿವರಿಸುತ್ತಾರೆ.

ಈ ರಸ್ತೆ ಡಾಂಬರೀಕರಣಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ಈಗಾಗಲೇ ಡಾಂಬರ್ ಮಾಡಿರುವ 3 ಕಿ.ಮೀ. ರಸ್ತೆಯಲ್ಲೂ ಅಲ್ಲಲ್ಲಿ ಗುಂಡಿಗಳು ಬಿದ್ದು ಅನೇಕ ತೊಂದರೆಗಳಾಗಿವೆ. ಹಾಗಾಗಿ ಶಾಸಕರು ಈ ಬಗ್ಗೆ ಗಮನ ಹರಿಸಿ ರಸ್ತೆ ಡಾಂಬರೀಕಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.

Leave a Comment