ರಸ್ತೆ ಗುಣಮಟ್ಟಕ್ಕೆ ಆದ್ಯತೆ ಅಧಿಕಾರಿಗಳಿಗೆ ಸಚಿವರ ಸೂಚನೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು, ನ. ೯- ರಾಜ್ಯದಲ್ಲಿ ರಸ್ತೆಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ಈ ವಿಚಾರದಲ್ಲಿ ಇಲಾಖಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಇಂದಿಲ್ಲಿ ಸೂಚಿಸಿದರು.

ವಿಧಾನಸೌಧದ ಮುಂಭಾಗ ಕರ್ನಾಟಕ ರಸ್ತೆ ಆಸ್ತಿ ನಿರ್ವಹಣಾ ವ್ಯವಸ್ಥೆಯ ತಂತ್ರಾಂಶದ ಕೈಪಿಡಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಇಲಾಖೆ ಮೂಲಕ ಕೈಗೆತ್ತಿಕೊಳ್ಳುವ ರಸ್ತೆಗಳ ಗುಣಮಟ್ಟದಲ್ಲಿ ಅಧಿಕಾರಿಗಳು ರಾಜಿ ಆಗಬಾರದು. ಉತ್ತಮ ರಸ್ತೆಗಳನ್ನು ನಿರ್ಮಿಸಲು ಹೆಚ್ಚು ಗಮನಹರಿಸಬೇಕು ಎಂದು ತಿಳಿಸಿದರು.

ರಸ್ತೆಗಳ ಗುಣಮಟ್ಟವನ್ನು ತಪಾಸಣೆ ಮಾಡುವ 1.29 ಕೋಟಿ ರೂ. ಮೌಲ್ಯದ ಫಾಲಿಂಗ್ ವೈಟ್ ಡಿಪ್ಲಕ್ಟೋ ಮೀಟರ್ ಮತ್ತು 75 ಲಕ್ಷ ರೂ. ಮೌಲ್ಯದ ಗ್ರೌಂಡ್ ಪೆನ್‌ಸ್ಟ್ರಾ ಎಷನ್ ಪ್ರಾಡರ್ ಉಪಕರಣವನ್ನು ಇದೇ ವೇಳೆ ಸಚಿವ ರೇವಣ್ಣ ಅವರು ಅನಾವರಣಗೊಳಿಸಿದರು.

ಫಾಲಿಂಗ್ ವೈಟ್ ಡಿಪ್ಲಕ್ಟೋ ಮೀಟರ್ ಉಪಕರಣವು ರಸ್ತೆಯ ಮೇಲ್ಮೈ ಪದರವನ್ನು ಯಾವುದೇ ರೀತಿಯಲ್ಲಿ ಅಪಾಯಗೊಳಿಸದೆ ಪರೀಕ್ಷೆ ನಡೆಸಲಿದೆ. ಅದೇ ರೀತಿ ಗ್ರೌಂಡ್ ಪೆನ್‌ಸ್ಟ್ರಾ ಎಷನ್ ಪ್ರಾಡರ್ ರಸ್ತೆಯ ಮೇಲೈನ ಪದರವನ್ನು ಅರಿಯುವ ಉಪಕರಣವಾಗಿದೆ ಎಂದು ಹೇಳಿದರು.

ಈ ಉಪಕರಣಗಳು ಸೇತುವೆಯ ಕೆಳಗೆ ಹಾಗೂ ಮೇಲೆ ಯಾವುದಕ್ಕೂ ಹಾನಿ ಮಾಡದಂತೆ ಪರೀಕ್ಷೆ ನಡೆಸಲಿದೆ ಎಂದು ಅವರು ತಿಳಿಸಿದರು.

ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ರಸ್ತೆಗಳ ಗುಣಮಟ್ಟವನ್ನು ಸುಧಾರಿಸುವತ್ತ ಅಧಿಕಾರಿಗಳು ಗಮನಹರಿಸಬೇಕು. ಮಾನವ ಬಳಕೆಯಿಂದ ರಸ್ತೆಗಳ ಗುಣಮಟ್ಟವನ್ನು ಕರಾರುವಕ್ಕಾಗಿ ತಿಳಿಯುವುದು ಅಸಾಧ್ಯ. ಇಂತಹ ರಸ್ತೆಗಳ ಬಳಕೆಯಿಂದ ಮಾತ್ರವೇ ಗುಣಮಟ್ಟ ಅರಿಯಲು ಸಾಧ್ಯ ಎಂದರು.

ಸಮಾರಂಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿ.ಎಂ. ವಿಜಯಭಾಸ್ಕರ್, ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಸ್ ಗೋಯಲ್ ಉಪಸ್ಥಿತರಿದ್ದರು.

ವಿಧಾನಸೌಧದ ಮುಂಭಾಗದಲ್ಲಿ ಲೋಕೋಪಯೋಗಿ ಇಲಾಖೆ ಆಯೋಜಿಸಿದ್ದ ರಸ್ತೆಗಳ ಕಾರ್ಯಾಚರಣೆ ಮತ್ತು ತಂತ್ರಾಂಶಗಳ ಕೈಪಡಿ ಸಮಾರಂಭಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಯು.ಟಿ. ಖಾದರ್, ಕೃಷ್ಣಭೇರೈಗೌಡ ಅವರು ಗೈರು ಹಾಜರಾಗಿದ್ದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಸಂದೇಶ ಕಳುಹಿಸಿ ಅನಿವಾರ್ಯ ಕಾರಣಗಳಿಂದಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು. ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬ ಸಂದೇಶದ ಪ್ರತಿ ಕಳುಹಿಸಿದ್ದರು.

Leave a Comment