ರಸ್ತೆ ಗುಂಡಿಗೆ ಸಸಿಗಳ ನೆಟ್ಟು ನಾಗರಿಕರ ಪ್ರತಿಭಟನೆ

ತುರುವೇಕೆರೆ, ಆ. ೧೭- ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿ ಸ್ಕೂಲ್ ಗೇಟ್ ಬಳಿಯ ಮೈಸೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಸಂಪೂರ್ಣ ಕಿತ್ತು ಹೋಗಿದ್ದು. ಇದನ್ನು ಕೂಡಲೇ ಸರಿಪಡಿಸಬೇಕೆಂದು ಒತ್ತಾಯಿಸಿ. ಬ್ಯಾಲಹಳ್ಳಿ ಆಸುಪಾಸಿನ ಗ್ರಾಮಸ್ಥರು ಗುಂಡಿಬಿದ್ದ ರಸ್ತೆಗೆ ಬಾಳೆ, ತೆಂಗಿನ ಸಸಿಗಳನ್ನು ನೆಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿ ಪ್ರತಿಭಟನೆ ನಡೆಸಿದರು.

ಜುಂಜಪ್ಪನ ದೇವಸ್ಥಾನದಿಂದ ಬ್ಯಾಲಹಳ್ಳಿ ಸ್ಕೂಲ್ ಗೇಟ್ ಬಳಿಯ ಮೈಸೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ ಭಾಗಶಃ ಕಿತ್ತು ಹೋಗಿದೆ. ಜಡಿಯಾದಿಂದ  ಮಹಿಳೆಯೋರ್ವರು ದ್ವಿಚಕ್ರ ವಾಹನದಲ್ಲಿ ಕಲ್ಲೂರ್ ಕ್ರಾಸ್ ಕಡೆ ತೆರಳುತ್ತಿರುವ ಸಂದರ್ಭದಲ್ಲಿ ಬ್ಯಾಲಹಳ್ಳಿ ಸ್ಕೂಲ್ ಗೇಟ್ ಬಳಿಯ ಗುಂಡಿಗಳನ್ನು ತಪ್ಪಿಸಲು ಹೋಗಿ ನೆಲಕ್ಕೆ ಉರುಳಿ ಬಿದ್ದಿದ್ದಾರೆ. ತಲೆಗೆ ಹಾಕಿಕೊಂಡಿದ್ದ ಹೆಲ್ಮೆಟ್‍ನ ಗ್ಲಾಸ್ ಕಣ್ಣಿಗೆ ಮತ್ತು ತಲೆಗೆ ಚುಚ್ಚಿಕೊಂಡು ತೀವ್ರ ರಕ್ತಸ್ರಾವವಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ.

ವಾರದ ಹಿಂದೆಯಷ್ಟೆ 2 ಆಟೋಗಳು ನೆಲಕ್ಕೆ ಉರುಳಿ ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದವು. 4 ದಿನಗಳ ಹಿಂದೆ ಇಬ್ಬರು ಬೈಕ್ ಸವಾರರು ಬಿದ್ದು ಹಿಂಬದಿಯ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಆರ್. ಜಯರಾಮ್ ಮಾತನಾಡಿ, ಲೋಕೋಪಯೋಗಿ ಇಲಾಖೆಯವರು ಸುಮಾರು ಆರು ತಿಂಗಳ ಹಿಂದೆಯಷ್ಟೆ 15 ಲಕ್ಷ ರೂಪಾಯಿ ಖರ್ಚು ಮಾಡಿ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾದರು. ಆದರೆ ಇದೀಗ ಯಥಾಸ್ಥಿತಿಗೆ ರಸ್ತೆ ಮರಳಿದ್ದು, ಸಂಬಂಧಿಸಿದ ಇಂಜಿನಿಯರ್‍ಗಳು ಮಾತ್ರ ಜಾಣಮೌನ ನಾಟಕವಾಡುತ್ತಿದ್ದಾರೆ. ಖುದ್ದು ನಾನೇ ತುರುವೇಕೆರೆ ಲೋಕೋಪಯೋಗಿ ಅಧಿಕಾರಿಗಳ ಬಳಿ ತೆರಳಿ ಪರಿಸ್ಥಿತಿ ತಿಳಿಸಿದರೂ ಗುಂಡಿ ಮುಚ್ಚಲು ತಾಂತ್ರಿಕ ಸಮಸ್ಯೆಯಿದ್ದು, ಕಾನೂನು ತೊಡಕಿದೆ ಎನ್ನುವ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ನಿತ್ಯವೂ ತುಮಕೂರು, ಮೈಸೂರು, ಬೆಂಗಳೂರು, ತುರುವೇಕೆರೆ. ಗುಬ್ಬಿ, ಕಲ್ಲೂರು, ಸಿಎಸ್.ಪುರ, ನಾಗಮಂಗಲ ಕಡೆಗೆ ಬಸ್, ಭಾರೀ ಗಾತ್ರದ ಲಾರಿ, ಟೆಂಪೋ, ಬೈಕ್ ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸಂಜೆ ಈ ಭಾಗದಲ್ಲಿ ವಾಹನ ಚಾಲನೆ ಮಾಡುವುದು ಕಷ್ಟದ ಕೆಲಸವಾಗಿದೆ. ಈ ದುರ್ಗಮ ರಸ್ತೆಯಲ್ಲಿ ಬೈಕ್ ಓಡಿಸುವುದೂ ಸವಾರರಿಗೆ ಸವಾಲಾಗಿದೆ. ಇಲ್ಲಿ ಪ್ರತಿದಿನ ಒಂದಲ್ಲಾ ಒಂದು ಅಪಘಾತಗಳು ಸಂಭವಿಸುತ್ತಿದ್ದು, ವಾಹನ ಸವಾರರು ಜೀವ ಭಯದಿಂದ ವಾಹನಗಳನ್ನು ಚಲಾಯಿಸಬೇಕಿದೆ. ಕೂಡಲೇ ಇದಕ್ಕೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಮುಂದಾಗುವ ಅನಾಹುತಗಳಿಗೆ ಲೋಕೋಪಯೋಗಿ ಇಲಾಖೆಯನ್ನು ಹೊಣೆಯಾಗಿಸಿ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಮಾನವೀಯತೆಯಿಂದ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯನ್ನು ಕೈಬಿಟ್ಟರೂ ಸಹ ರಸ್ತೆಯಲ್ಲಿ ನೆಡಲಾಗಿದ್ದ ಗಿಡಗಳನ್ನು ತೆರವುಗೊಳಿಸದೆ ಸೂಚನಾ ಫಲಕಗಳಂತೆ ಅಲ್ಲಿಯೇ ಬಿಡಲಾಗಿದೆ.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜುಂಜೇಗೌಡ, ಸದಸ್ಯ ಶಂಕರ್,  ಗ್ರಾಮಸ್ಥರುಗಳಾದ ರಾಜು, ಪರಮೇಶ್, ಸುರೇಶ್, ರಾಮೇಗೌಡ, ನಾಗರಾಜು, ರವೀಶ್, ದೇವರಾಜು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Comment