ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಭೂಮಿ ಪೂಜೆ

ಕೆ.ಆರ್.ಪೇಟೆ,ನ.14- ತಾಲೂಕಿನ ಅಕ್ಕಿಹೆಬ್ಬಾಳು ರೈಲ್ವೆ ನಿಲ್ದಾಣದಿಂದ ಗುಳುವಿನಅತ್ತಿಗುಪ್ಪೆ, ಬಾರೇಸಂತೆ ಮಾರ್ಗವಾಗಿ ಹೊಳೆನರಸೀಪುರ ತಾಲೂಕಿಗೆ ಸಂಪರ್ಕ ಕಲ್ಪಿಸುವ ಗಡಿ ಹೆದ್ದಾರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ವಿಶೇಷ ಅನುಧಾನ 8ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕೆ.ಸಿ.ನಾರಾಯಣಗೌಡ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ನಾರಾಯಣಗೌಡ ಅವರು ರಾಜಕಾರಣ ಕ್ಷೇತ್ರಕ್ಕೆ ನಾನು ಹೊಸಬನಾಗಿದ್ದರೂ ತಾಲೂಕಿನ ಜನಸಾಮಾನ್ಯರ ನೋವು ನಲಿವುಗಳನ್ನು ಅರ್ಥ ಮಾಡಿಕೊಂಡಿದ್ದೇನೆ. ಹಾಗಾಗಿ ತಾಲೂಕಿನ ಸಮಗ್ರವಾದ ಅಭಿವೃದ್ಧಿಗೆ ರಸ್ತೆಗಳು, ಆಸ್ಪತ್ರೆಗಳು, ಶಾಲಾ-ಕಾಲೇಜು ಕಟ್ಟಡಗಳು, ವಿದ್ಯುತ್ ಸಬ್‍ಸ್ಟೇಷನ್‍ಗಳ ನಿರ್ಮಾಣ ಹಾಗೂ ಶಾಶ್ವತ ಕುಡಿಯುವ ನೀರು ಯೋಜನೆಯ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದೇನೆ. ರಾಜಕೀಯ ಲಾಭಕ್ಕಾಗಿ ಸುಳ್ಳು ಹೇಳುವ ಜಾಯಮಾನ ನನ್ನದಲ್ಲ. ತಾಲೂಕಿನ ಜನತೆ ನನಗೆ ನೀಡಿರುವ ಜವಾಬ್ಧಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇನೆ. ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದರೂ ಸಹ ಕೇವಲ ರಾಜಕೀಯ ಕಾರಣಗಳಿಗಾಗಿ ನನ್ನ ವಿರುದ್ಧ ವಿರೋಧ ಪಕ್ಷಗಳು ಆಧಾರ ರಹಿತವಾಗಿ ಆರೋಪ ಮಾಡುತ್ತಿವೆ ಆದರೆ ಈ ಆರೋಪಕ್ಕೆ ತಲೆಕೆಡಿಸಿಕೊಳ್ಳದೇ ಅಭಿವೃದ್ದಿ ಮೂಲಕ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕ ನಾರಾಯಣಗೌಡ ಹೇಳಿದರು.
ನಾನು ವಿರೋಧ ಪಕ್ಷದ ಶಾಸಕನಾಗಿದ್ದರೂ ಸಹ ನನ್ನ ಶಕ್ತಿ ಮೀರಿ ತಾಲೂಕಿಗೆ ಸುಮಾರು 1300ಕೋಟಿ ರೂಗಳ ಅನುಧಾನ ತಂದಿದ್ದೇನೆ. ವಿದ್ಯುತ್ ವಿಭಾಗೀಯ ಕಛೇರಿ, ಟ್ರಾನ್ಸ್‍ಫಾರ್ಮರ್ ಸರ್ವಿಸ್ ಸ್ಟೇಷನ್, ನೆನಗುದಿಗೆ ಹೊಸಹೊಳಲು ಮೇಲ್ಗಾಲುವೆಗೆ ಕಾಮಗಾರಿಗೆ ಚಾಲನೆ, 70ಕೋಟಿಯ ನವೋದಯ ಮಾದರಿಯ ಕೇಂದ್ರೀಯ ಅಲ್ಪಸಂಖ್ಯಾತರ ಕಟ್ಟಡದ ಕಾಮಗಾರಿಗೆ ಚಾಲನೆ, ಗಂಜಿಗೆರೆ ಹರಿಯಾಲದಮ್ಮ ಗ್ರಾಮಗಳಲ್ಲಿ ವಿದ್ಯುತ್ ಸಬ್ ಸ್ಟೇಷನ್‍ಗಳ ನಿರ್ಮಾಣ, ಬೂಕನಕೆರೆ ಹೋಬಳಿಯ 25 ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿದೆ. ಜನಿವಾರ ಕೆರೆ ಏತ ನೀರಾವರಿ ಯೋಜನೆಯ ಕಾಮಗಾರಿಯೂ ಭರದಿಂದ ನಡೆಯುತ್ತಿದೆ ಎಂದು ನಾರಾಯಣಗೌಡ ತಿಳಿಸಿದರು.
ಜಿ.ಪಂ.ಸದಸ್ಯ ಬಿ.ಎಲ್.ದೇವರಾಜು, ತಾ.ಪಂ.ಉಪಾಧ್ಯಕ್ಷ ಜಾನಕೀರಾಂ, ಮುಖಂಡರಾದ ಎನ್.ರಮೇಶ್, ಡಿ.ಪಿ.ಪರಮೇಶ್, ಕೆ.ಮನು, ಪಿ.ಪ್ರವೀಣ್, ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ದಡದಹಳ್ಳಿ ಅತೀಕ್, ತಾ.ಪಂ ಮಾಜಿ ಸದಸ್ಯ ರಾಮಸ್ವಾಮಿ, ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಣ್ಣಯ್ಯ, ನಾಗರಾಜು, ವಿಜಯಮ್ಮ, ಆಲಂಬಾಡಿಕಾವಲು ರಾಜು, ಗ್ರಾ.ಪಂ.ಉಪಾಧ್ಯಕ್ಷ ಎ.ಜೆ.ಕುಮಾರ್, ಗ್ರಾ.ಪಂ ಸದಸ್ಯ ಪ್ರಸನ್ನ, ಲೋಕೋಪಯೋಗಿ ಇಲಾಖೆಯ ಎಇಇ ಬಾಲಕೃಷ್ಣಪ್ಪ, ಸಹಾಯಕ ಇಂಜಿನಿಯರ್ ಶಿವರಾಂ, ಜೆ.ಡಿ.ಎಸ್.ಹೋಬಳಿ ಘಟಕದ ಅಧ್ಯಕ್ಷ ಎಸ್.ಕೆ.ಸುರೇಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Comment