ರಸ್ತೆ ಅಪಘಾತಕ್ಕೆ ನಾಲ್ವರು ಬಲಿ

ಬೆಂಗಳೂರು, ಅ. ೨೧- ನಗರದ ಜಾಲಹಳ್ಳಿ, ಶಿವಾಜಿನಗರ, ಎಲೆಕ್ಟ್ರಾನಿಕ್ ಸಿಟಿ ಹಾಗೂ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಜಾಲಹಳ್ಳಿಯ ಹೆಚ್.ಎಂ.ಟಿ. ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ 7ರ ವೇಳೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಖಾಸಗಿ ಶಾಲೆಯೊಂದರ ಆಡಳಿತ ವರ್ಗದ ಸಿಬ್ಬಂದಿ ಸುರೇಶ್ (60) ಎಂಬುವವರು ಆಯತಪ್ಪಿಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಉಲ್ಲಾಳ ಕ್ರಾಸ್‌ನ ಸುರೇಶ್ ಖಾಸಗಿ ಶಾಲೆಯೊಂದರ ಆಡಳಿತ ಮಂಡಳಿಯ ಸಿಬ್ಬಂದಿಯಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಮೃತಪಟ್ಟಿದ್ದಾರೆ. ಜಾಲಹಳ್ಳಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶಿವಾಜಿನಗರದ ಕ್ವೀನ್ ರಸ್ತೆಯ ಜಸ್ಮಾದೇವಿ ಭವನದ ಕಡೆಯಿಂದ ಬಲ ತಿರುವು ಪಡೆದುಕೊಳ್ಳುವಾಗ ಕಾರು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ನಿನ್ನೆ ರಾತ್ರಿ ಮೃತಪಟ್ಟಿದ್ದಾನೆ. ವಸಂತನಗರದ ಶ್ರೀನಿವಾಸ್ (49) ಮೃತಪಟ್ಟಿದ್ದು, ಕಳೆದ ಅಕ್ಟೋಬರ್ 13 ರಂದು ಬೆಳಿಗ್ಗೆ 9ರ ವೇಳೆ ನಡೆದ ಈ ಅಪಘಾತದಲ್ಲಿ ಗಾಯಗೊಂಡು ಮಹಾವೀರ್ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆತ ರಾತ್ರಿ ಮೃತಪಟ್ಟಿದ್ದಾರೆ.
ಕೂಲಿ ಕಾರ್ಮಿಕ ಸಾವು
ಎಲೆಕ್ಟ್ರಾನಿಕ್ ಸಿಟಿಯ ಗಾರ್ವೆಬಾವಿ ಪಾಳ್ಯದ ಕೆರೆಯ ಹತ್ತಿರ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಕೂಲಿ ಕಾರ್ಮಿಕ ಪಾಲಗಿರಿ ಚಾಂದ್ ಪಾಷ (45) ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಗಾರ್ವೆಬಾವಿ ಪಾಳ್ಯದ ಚಾಂದ್ ಪಾಷ ಅವರು, ಕೆಲಸ ಮುಗಿಸಿಕೊಂಡು ಹೊಂಡಾ ಆಕ್ಟೀವಾ ಸ್ಕೂಟರ್‌ನಲ್ಲಿ ಅ. 19 ರಂದು ರಾತ್ರಿ 10.30ರ ವೇಳೆ ಹೋಗುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಯುವಕ ಸಾವು
ಕೆಂಪಾಪುರ ಮುಖ್ಯರಸ್ತೆಯ ಅಂಬೇಡ್ಕರ್ ಪುತ್ಥಳಿ ಬಳಿ ವೇಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದ ದೇವೇಂದ್ರನ್ (30) ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಕೆಂಪಾಪುರದ ದೇವೇಂದ್ರನ್ ಅವರು, ಕಳೆದ ಅ. 15 ರಂದು ಬೈಕ್‌ನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ವಿಮಾನ ನಿಲ್ದಾಣ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment