ರಸ್ತೆಗೆ ಕಸ ಹಾಕಿದ ವ್ಯಕ್ತಿಗೆ ದಂಡ ಹಾಕಿದ ಪಾಲಿಕೆ ನೌಕರನ ಮೇಲೆ ಹಲ್ಲೆ

ತುಮಕೂರು, ಜೂ. ೧೩- ರಸ್ತೆಗೆ ಕಸ ಹಾಕುತ್ತಿದ್ದ ಅಂಗಡಿಯೊಂದರ ಮಾಲೀಕನಿಗೆ ದಂಡ ಕಟ್ಟುವಂತೆ ಸೂಚಿಸಿದ ಮಹಾನಗರ ಪಾಲಿಕೆ ನೌಕರನ ಮೇಲೆ ಅಂಗಡಿ ಮಾಲೀಕ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿಂದು ನಡೆದಿದೆ.

ನಗರದ ಗೋಕುಲ ರಸ್ತೆಯಲ್ಲಿರುವ ಬಸವ ಸ್ಟೋರ್ ಮಾಲೀಕರು ಪ್ರತಿನಿತ್ಯ ಕಸವನ್ನು ರಸ್ತೆಗೆ ತಂದು ಸುರಿಯುತ್ತಿದ್ದರು. ಸದರಿ ಅಂಗಡಿಯ ಸಮೀಪದಲ್ಲಿ ಪಾಲಿಗೆಯ ಆರೋಗ್ಯಾಧಿಕಾರಿ ಡಾ. ನಾಗೇಶ್‌ಕುಮಾರ್ ಅವರ ಮನೆಯಿದ್ದು, ಪ್ರತಿದಿನ ಇವರು ರಸ್ತೆಗೆ ಕಸ ಹಾಕುತ್ತಿದ್ದನ್ನು ಗಮನಿಸಿದ್ದಾರೆ. ಅಲ್ಲದೆ ರಸ್ತೆ ಕಸ ಹಾಕದೆ ಪಾಲಿಕೆಯಿಂದ ಬರುವ ಕಸ ಸಂಗ್ರಹಿಸುವ ಆಟೋಗೆ ಕಸ ಹಾಕುವಂತೆ ಸಲಹೆ ಮಾಡಿದ್ದಾರೆ.

ಆದರೂ ಈ ಅಂಗಡಿ ಮಾಲೀಕ ಪಾಲಿಕೆ ಆರೋಗ್ಯಾಧಿಕಾರಿಗಳ ಮಾತಿಗೆ ಕಿಮ್ಮತ್ತು ನೀಡದೆ ದಿನನಿತ್ಯ ರಸ್ತೆಗೆ ಕಸ ಹಾಕುತ್ತಿದ್ದರು.

ಇಂದು ಬೆಳಿಗ್ಗೆ ಗೋಕುಲ ರಸ್ತೆಯಲ್ಲಿ ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಷಡಕ್ಷರಿ, ಮೇಲ್ವಿಚಾರಕರಾದ ಗಂಗಾಧರ್ ಮತ್ತು ಪೌರ ಕಾರ್ಮಿಕರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ.

ಆ ಸಂದರ್ಭದಲ್ಲಿ ಬಸವ ಸ್ಟೋಱ್ಸ್ ಅಂಗಡಿ ಮಾಲೀಕ ಎಂದಿನಂತೆ ಇಂದು ಸಹ ಕಸವನ್ನು ರಸ್ತೆಗೆ ತಂದು ಸುರಿದಿದ್ದಾನೆ. ಇದನ್ನು ನೋಡಿದ ಪಾಲಿಕೆ ಸಿಬ್ಬಂದಿ ಆತನನ್ನು ಕರೆದು ಕಸವನ್ನು ರಸ್ತೆ ಹಾಕದಂತೆ ಸೂಚಿಸಿದ್ದಾರೆ. ಆದರೂ ಇವರ ಮಾತನ್ನು ಲೆಕ್ಕಿಸದೆ ಕಸವನ್ನು ರಸ್ತೆಗೆ ಸುರಿದು ಹೋಗಿದ್ದಾರೆ.

ಇದನ್ನು ಕಣ್ಣಾರೆ ಕಂಡ ಆರೋಗ್ಯಾಧಿಕಾರಿ ಡಾ. ನಾಗೇಶ್‌ಕುಮಾರ್ ಅವರು ಸ್ಥಳದಲ್ಲಿದ್ದ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ಸದರಿ ವ್ಯಕ್ತಿಗೆ ದಂಡ ವಿಧಿಸುವಂತೆ ಸೂಚನೆ ನೀಡಿದ್ದಾರೆ.

ಮೇಲಾಧಿಕಾರಿಯ ಸೂಚನೆ ಮೇರೆಗೆ ಬಸವ ಸ್ಟೋಱ್ಸ್‌ನ ಮಾಲೀಕರಿಗೆ ದಂಡ ಹಾಕಲು ಮುಂದಾದ ಪಾಲಿಕೆ ಮೇಲ್ವಿಚಾರಕ ಗಂಗಾಧರ್ ಅವರ ಮೇಲೆ ಅಂಗಡಿ ಮಾಲೀಕ ಹಲ್ಲೆ ನಡೆಸಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಪೌರ ಕಾರ್ಮಿಕರು ಗಂಗಾಧರ್‌ರವರನ್ನು ಬಿಡಿಸಿಕೊಂಡು ಜಯನಗರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಠಾಣೆ ಪೊಲೀಸರು ಹಲ್ಲೆ ನಡೆಸಿರುವ ಅಂಗಡಿ ಮಾಲೀಕನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

Leave a Comment