ರಸ್ತೆಗುಂಡಿ ಮೇಲೆ ಮಾಡಿದ ಮೂನ್ ವಾಕ್ ಮೆಕ್ಸಿಕೋದಲ್ಲಿ ಮರುಸೃಷ್ಟಿ!

 

ಬೆಂಗಳೂರು, ಸೆ ೧೩- ನಗರದಲ್ಲಿ ರಸ್ತೆ ಗುಂಡಿಗಳ ಬಗ್ಗೆ ಜಾಗೃತಿ ಮೂಡಿಸಿ ಗಮನ ಸೆಳೆದ ಖ್ಯಾತ ಚಿತ್ರಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಹೆರೋಹಳ್ಳಿಯ ರಸ್ತೆ ಮೇಲೆ ಮಾಡಿದ ಮೂನ್ ವಾಕ್ ಶೈಲಿಯ ಮಾದರಿಯನ್ನು ಮೆಕ್ಸಿಕೋದಲ್ಲಿ ಮರುಸೃಷ್ಟಿ ಮಾಡಿರುವುದು ಗಮನಾರ್ಹ

ಬಾದಲ್ ನಂಜುಂಡಸ್ವಾಮಿ, ಕನ್ನಡದ ಖ್ಯಾತ ಚಿತ್ರಕಲಾವಿದ. ಹಲವಾರು ನಾಗರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಮ್ಮದೇ ಆದ ಶೈಲಿಯಲ್ಲಿ ರಸ್ತೆ ಗುಂಡಿಗಳ ಮೇಲೆ ಚಿತ್ರಿಸಿ ಆಡಳಿತ ವ್ಯವಸ್ಥೆಯ ಕಣ್ತೆರೆಸುವ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

ಬೆಂಗಳೂರು ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸುವ ಅವರ ಇತ್ತೀಚಿಗೆ ಹೆರೋಹಳ್ಳಿಯ ಹಾಳುಬಿದ್ದ ರಸ್ತೆ ಮೇಲೆ ‘ಮೂನ್ ವಾಕ್’ ಇದೀಗ ಸಾಕಷ್ಟು ವೈರಲ್ ಆಗಿದ್ದು, ಇದನ್ನೇ ಮೆಕ್ಸಿಕೋ ನಗರದ ಜಾಹೀರಾತು ಏಜೆನ್ಸಿಯೊಂದು ಮರುಸೃಷ್ಟಿ ಮಾಡಿದೆ.

ಮೆಕ್ಸಿಕೋದ ಪಚುಕಾ, ಹಿಡಾಲ್ಗೋ ರಸ್ತೆಗಳು ಹಾಳಾಗಿದ್ದರೂ ಅಲ್ಲಿನ ಆಡಳಿತ ಸರಿಪಡಿಸಲು ಮನಸ್ಸು ಮಾಡದಿರುವ ಹಿನ್ನೆಲೆಯಲ್ಲಿ ಬಾದಲ್ ನಂಜುಂಡಸ್ವಾಮಿ ಅವರ ಪರಿಕಲ್ಪನೆಯ ಮಾದರಿಯಲ್ಲಿ ಗಗನಯಾತ್ರಿಯ ವೇಷಧಾರಿಯೊಬ್ಬ ಮೆಕ್ಸಿಕನ್ ಬಾವುಟ ಹಿಡಿದು ರಸ್ತೆಯಲ್ಲಿ ಸಂಚರಿಸುವ ವಿಡಿಯೋವನ್ನು ಸಿದ್ಧಪಡಿಸಿರುವ ಜಾಹೀರಾತು ಸಂಸ್ಥೆಯು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.

ಜಾಹೀರಾತು ಸಂಸ್ಥೆಯಾದ ಬೊವೆಡ ಸೆಲೆಸ್ಟೆಯು ಬಾದಲ್ ನಂಜುಂಡಸ್ವಾಮಿ ಅವರನ್ನು ಸಂಪರ್ಕಿಸಿ ತಮ್ಮ ಮೂನ್ ವಾಕ್ ಮಾದರಿಯನ್ನು ಮರುಸೃಷ್ಟಿ ಮಾಡಲು ಅನುಮತಿ ಕೋರಿದ್ದಲ್ಲದೇ, ಸಲಹೆಗಳನ್ನು ಪಡೆದ ನಂತರ ಈ ವಿಡಿಯೋವನ್ನು ಸಿದ್ಧಪಡಿಸಿದೆ.

Leave a Comment