ರಸ್ತೆಗಳ ವೈಟ್ ಟಾಪಿಂಗ್ ತನಿಖೆಗೆ ಸಿಎಂ ಸೂಚನೆ

ಬೆಂಗಳೂರು, ಆ. ೧೪- ನಗರದಲ್ಲಿ ಟೆಂಡರ್‌ಶೂರ್ ಯೋಜನೆಯಡಿ ಕೈಗತ್ತಿಕೊಂಡಿರುವ ರಸ್ತೆಗಳ ವೈಟ್‌ಟಾಪಿಂಗ್ ಕಾಮಗಾರಿಗಳ ಅವ್ಯವಹಾರಗಳ ಬಗ್ಗ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಹೇಳಿದರು.
ರಸ್ತೆಗಳ ವೈಟ್‌ಟಾಪಿಂಗ್ ಕಾಮಗಾರಿಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಈ ಕಾಮಗಾರಿಗಳ ಅವ್ಯವಹಾರಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ ಎಂದರು.
ಬೆಂಗಳೂರು ಅಭಿವೃದ್ಧಿಯ ವಿಚಾರದಲ್ಲಿ ಆಗಿರುವ ಲೋಪಗಳು, ಅವ್ಯವಹಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಎಲ್ಲವನ್ನು ಸರಿಪಡಿಸಿ ಸುಂದರ ಬೆಂಗಳೂರು ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ ಎಂದರು.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಹಾಗೂ ಸಂಸದರ ನಿಯೋಗ ಇಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು, ಕಳೆದ ಮೂಱ್ನಾಲ್ಕು ವರ್ಷಗಳಲ್ಲಿ ಬಿಬಿಎಂಪಿಯಲ್ಲಿ ಆಗಿರುವ ಅವ್ಯವಹಾರಗಳು, ಅನುದಾನ ಬಿಡುಗಡೆಯಲ್ಲಿ ಆಗಿರುವ ತಾರತಮ್ಯಗಳನ್ನು ವಿವರಿಸಿದ್ದೇವೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
@12bc = ಕಾಮಗಾರಿ ನಿಂತಿಲ್ಲ
ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಗತಿಯಲ್ಲಿರುವ ಯಾವುದೇ ಕಾಮಗಾರಿಗಳು ನಿಂತಿಲ್ಲ. ತರಾತುರಿಯಲ್ಲಿ ಅಕ್ರಮವಾಗಿ ಟೆಂಡರ್ ಕರೆದು ಕಾಮಗಾರಿ ನೀಡಿರುವುದಕ್ಕೆ ತಡೆ ಹಾಕಲಾಗಿದೆ ಎಂದು ಸ್ಪಷ್ಟಪಡಿಸಿದರು.
@12bc = ಬಿಬಿಎಂಪಿ ಬಜೆಟ್‌ ಅಕ್ರಮ
ಬಿಬಿಎಂಪಿಯ ಬಜೆಟ್‌ನ್ನು 13 ಸಾವಿರ ಕೋಟಿ ರೂ.ಗಳಿಗೆ ಪರಿಷ್ಕರಿಸಲಾಗಿತ್ತು. ಆದರೆ ಇದಕ್ಕೆ ಹಣಕಾಸು ಇಲಾಖೆಯ ಅನುಮತಿ ಪಡೆದಿರಲಿಲ್ಲ. ಹಣಕಾಸು ಇಲಾಖೆ ಅನುಮತಿ ನೀಡಿದ್ದು 9 ಸಾವಿರ ಕೋಟಿ ರೂ. ಬಜೆಟ್‌ಗೆ ಮಾತ್ರ. ಹಾಗಾಗಿ 13 ಸಾವಿರ ಕೋಟಿ ರೂ. ಬಜೆಟ್ ಅಕ್ರಮ ಬಜೆಟ್‌ ಆಗುತ್ತದೆ. ಇದಕ್ಕೂ ಮುಖ್ಯಮಂತ್ರಿಗಳು ತಡೆ ನೀಡಿದ್ದಾರೆ. ಹಣಕಾಸು ಇಲಾಖೆಯ ಅನುಮತಿ ಹಾಗೂ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದ ನಂತರ ಬಜೆಟ್‌ಗೆ ಒಪ್ಪಿಗೆ ಸೂಚಿಸಲಾಗುವುದು ಎಂದರು.
@12bc = ವಿಶೇಷ ಕಾನೂನು
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಿನ ಕೆಎಂಸಿ ಕಾಯ್ದೆ ಬದಲು ವಿಶೇಷವಾದ ಕಾನೂನು ರೂಪಿಸುವಂತೆಯೂ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ಬೇರೆ ಸ್ಥಳೀಯ ಸಂಸ್ಥೆಗಳಿಗೆ ಹೊರತುಪಡಿಸಿ ಬೆಂಗಳೂರು ಅಭಿವೃದ್ಧಿಗಾಗಿಯೇ ವಿಶೇಷ ಕಾನೂನು ರೂಪಿಸುವಂತೆಯೂ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದು ಆರ್. ಅಶೋಕ್ ಹೇಳಿದರು.

Leave a Comment