ರಸ್ತೆಗಳ ಡಾಂಬರೀಕರಣ ಅವ್ಯವಹಾರ ಸಿಬಿಐ ತನಿಖೆಗೆ ಆಗ್ರಹ

ಬೆಂಗಳೂರು, ಸೆ. ೧೩- ಕಳೆದ 17 ತಿಂಗಳ ಅವಧಿಯಲ್ಲಿ ನಗರದ ಮುಖ್ಯರಸ್ತೆಗಳ ಡಾಂಬರೀಕರಣ ಕಾಮಗಾರಿಗಳಿಗಾಗಿ ಸರ್ಕಾರ ಮತ್ತು ಬಿಬಿಎಂಪಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆಸಿದ್ದು, ಈ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್‌ರವರು ಆಗ್ರಹಪಡಿಸಿದ್ದಾರೆ.
ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ 1 ಸಾವಿರದ 15 ಕೋಟಿ 93 ಲಕ್ಷದ 82 ಸಾವಿರದ ನೂರ ಅರವತ್ತೊಂದು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಕೇವಲ ನಾಲ್ಕೆದು ತಿಂಗಳ ಅವಧಿಯಲ್ಲಿ ಕಳಪೆ ಕಾಮಗಾರಿ ಬಟಾಬಯಲಾಗಿದ್ದು, ಇಪ್ಪತ್ತು ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳು ಸೃಷ್ಟಿಯಾಗಿವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಅವರು ಆರೋಪಿಸಿದರು.
ಕಳಪೆ ಗುಣಮಟ್ಟದ ಡಾಂಬರೀಕರಣದಿಂದ ಹೊಸದಾಗಿ ನಿರ್ಮಿಸಿದ 707 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣವಾಗಿ ಒಂದೇ ಒಂದು ಮಹಾ ಮಳೆಗೆ ಹಾಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಬಿಡುಗಡೆ ಮಾಡಿದ ಸಾವಿರದ ಮುನ್ನೂರು ಕೋಟಿ ರೂ ಪೈಕಿ ರಸ್ತೆಗಳ ಅಭಿವೃದ್ಧಿಗೆಂದೇ 2,075 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು, ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಪೈತಾನ್ ಯಂತ್ರಗಳ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು 15 ಕೋಟಿ 20 ಲಕ್ಷ ರೂಪಾಯಿಗಳಷ್ಟು ಅಕ್ರಮ ನಡೆದಿದೆ ಎಂದು ಟಿ.ವಿ.ಸಿ.ಸಿ. ವರದಿ ಹೇಳಿದೆ. ನಗರದ ಮುಖ್ಯ ರಸ್ತೆಗಳ ಗುಂಡಿಗಳನ್ನು ಮುಚ್ಚಲು 16 ಕೋಟಿ 88 ಲಕ್ಷದ ಮೂವತ್ತೆರಡು ಸಾವಿರದ ನೂರ ಅರವತ್ತೊಂದು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ಅಲ್ಲದೇ ಲೋಕೋಪೋಯೋಗಿ ಇಲಾಖೆಯಿಂದ ಪಾಲಿಕೆಯ ವ್ಯಾಪ್ತಿಯ 217.43 ಕಿ.ಮೀ. ಉದ್ದದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 227 ಕೋಟಿ 74 ಲಕ್ಷ ಹಾಗೂ 490 ಕಿ.ಮೀ. ಉದ್ದದ ರಸ್ತೆಗಳ ಅಭಿವೃದ್ಧಿಗೆ 756 ಕೋಟಿ 11 ಲಕ್ಷದ ಐವತ್ತು ಸಾವಿರ ರೂಗಳನ್ನು ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಹೇಳಿವೆ ಎಂದು ತಿಳಿಸಿದರು. ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಗುಂಡಿಗಳು ಕಾಣಿಸಿ ಕೊಂಡಿವೆ. ಆದರೆ ಬಿಬಿಎಂಪಿ ಆಯುಕ್ತರು ಕೇವಲ 5, ಸಾವಿರ ಗುಂಡಿಗಳಿವೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆಪಾದಿಸಿದರು.
6 ಕೋಟಿ 70 ಲಕ್ಷ ರೂ ವೆಚ್ಚದಲ್ಲಿ ಹೊಸದಾಗಿ ಡಾಂಬರೀಕರಣ ಮಾಡಿದ್ದ ಡಾ.ಬಾಲ ಗಂಗಾಧರನಾಥ್ ಸ್ವಾಮಿ ಮೇಲು ಸೇತುವೆಯೂ ಕೇವಲ 2 ತಿಂಗಳೊಳಗೆ ಹಾಳಾಗಿದೆ ಎಂದು ದೂರಿದ್ದರು. ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಕಮೀಷನ್ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ತಮ್ಮದೇ ಆದ ಅಧಿಕಾರಯುಕ್ತ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯು ಕಾಮಗಾರಿಗಳ ಅಂದಾಜು ಮೊತ್ತಕ್ಕಿಂತ ಶೇ.30 ರಿಂದ ಶೇ. 62 ರಷ್ಟಕ್ಕೂ ಹೆಚ್ಚಿನ ಮೊತ್ತವನ್ನು ನಮೂದಿಸುವ ಮೂಲಕ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಹೇಳಿದರು.
ಕಳೆದ 4 ವರ್ಷಗಳ ಅವಧಿಯಲ್ಲಿ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆಗಳ ಅಭಿವೃದ್ಧಿ ಖರ್ಚು ವೆಚ್ಚಗಳ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕೆಂದು ಎನ್.ಆರ್.ರಮೇಶ್ ಒತ್ತಾಯಿಸಿದರು.
ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಗುತ್ತಿಗೆದಾರರಿಂದ ಕಮೀಷನ್ ಕಬಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಮತ್ತು ಪಾಲಿಕೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ, ಎ.ಸಿ.ಬಿ. ಜಾರಿ ನಿರ್ದೇಶನಾಲಯದಲ್ಲಿ ದೂರು ಸಲ್ಲಿಸಲಾಗಿದೆ. ಅಲ್ಲದೇ ಇವರೆಲ್ಲರ ವಿರುದ್ಧ ಎ.ಸಿ.ಎಂ.ಎಂ. ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದರು.

Leave a Comment