ರಸಾನಂದ ನೀಡಿದ ಕಥಕ್ ರಂಗಾವಳಿ

ಪ್ರಖ್ಯಾತ ಕಥಕ್ ನೃತ್ಯಗಾರ್ತಿ ಸಂಪದಾ ಪಿಳ್ಳೈ ತಮ್ಮ ‘’ರಿದ್ಧಂ ” ಕಥಕ್ ನೃತ್ಯಶಾಲೆ ಹಾಗೂ ಪುಣೆಯ ‘ರುಜುತಾ ಸೋಮನ್ ಕಲ್ಚುರಲ್ ಅಕಾಡೆಮಿ’ಯ ಸಹಯೋಗದೊಂದಿಗೆ ಇತ್ತೀಚಿಗೆ ಪ್ರಸ್ತುತಪಡಿಸಿದ ರಂಗುರಂಗಾದ ‘’ಕಥಕ್ ರಂಗ್‘’ ಸೊಬಗಿನ ನೃತ್ಯಪ್ರದರ್ಶನ ಮಲ್ಲೇಶ್ವರದ ‘’ಸೇವಾಸದನ”ದಲ್ಲಿ ನಗರದ ಕಲಾರಸಿಕರ ಕಣ್ಮನ ತಣಿಸಿತು.
ಈ ಇಬ್ಬರು ಕಲಾವಿದೆಯರೂ ಪುಣೆಯ ಕಥಕ್ ದಿಗ್ಗಜ ಗುರು ಪಂಡಿತ್ ಡಾ. ರೋಹಿಣಿ ಭಾಟೆಯವರ ಹಿರಿಯ ಶಿಷ್ಯರು. ಪ್ರತಿಭಾವಂತ ಈ ಯುಗಳ ನರ್ತಕಿಯರು, ಏಕವ್ಯಕ್ತಿ ಹಾಗೂ ಸಮೂಹ ಕಥಕ್ ನೃತ್ಯವೈವಿಧ್ಯದಲ್ಲಿ ಕಥಕ್ ನೃತ್ಯದ ವಿವಿಧ ಆಯಾಮಗಳನ್ನು ಪ್ರದರ್ಶಿಸಿದರು. ಇವರೊಂದಿಗೆ ರುಜುತಾ ಸೋಮನ್ ಶಿಷ್ಯರಾದ ಶಿವಾಂಗಿ ಮಂಡ್ಕೆ ಮತ್ತು ಸನಿಕಾ ಡಿಯೋಧರ್ ದಿ. ರೋಹಿಣಿ ಭಾಟೆಯವರ ಹಲವು ರಚನೆ ಮತ್ತು ನೃತ್ಯಸಂಯೋಜನೆಯ ಕೃತಿಗಳನ್ನು ಪ್ರಸ್ತುತಪಡಿಸಿ ಮನೋಲ್ಲಾಸ ನೀಡಿದರು.
ಶುಭಾರಂಭದಲ್ಲಿ ‘ಗಣೇಶಸ್ತುತಿ’ ದ್ರುಪದ್ ರೂಪದಲ್ಲಿದ್ದು ಇದನ್ನು ನಾಲ್ಕೂಜನ ಕಲಾವಿದೆಯರು ಸಾಮರಸ್ಯದ ಆಂಗಿಕಗಳಿಂದ, ಮನೋಹರ ಹೆಜ್ಜೆ-ಗೆಜ್ಜೆಗಳ ಝಣತ್ಕಾರದಿಂದ, ಮೋಹಕ ನಗೆ-ನೋಟಗಳಿಂದ ಮನಸೂರೆಗೊಂಡರು. ‘ಗಣನಾಥ ಗೌರಿಸುತ’ನ ಚಿದಾನಂದರೂಪವನ್ನು ನವಿರಾದ ಹಸ್ತಚಲನೆಗಳು, ಚಕ್ಕರುಗಳ ಮೋಡಿಯಿಂದ ಸುಂದರವಿನ್ಯಾಸದಲ್ಲಿ ಗಣಪತಿಯಭಂಗಿ ಚಿತ್ರಿಸಿದರು.
ನಾಲ್ಕೂಜನ ಪ್ರಸ್ತುತಪಡಿಸಿದ ‘ಮಧ್ಯ ದ್ರುತ್ ಜಪ್ತಾಳ್ ’ಕಥಕ್ಕಿನ ತಾಂತ್ರಿಕಾಂಶಗಳಿಂದ ಕೂಡಿತ್ತು. ರೇಖೀಯ ಚಲನೆಗಳು, ದೇಹದ ಹರಿವಿನೊಂದಿಗೆ ಶಬ್ದ ಏರಿಳಿತದ ಸುಶ್ರಾವ್ಯದ ಆಯಾಮಗಳು, ಸಂಪೂರ್ಣ ದೃಶ್ಯಾನುಭವವನ್ನು ದಕ್ಕಿಸಿತು. ಲಯವಾದ್ಯಗಳ ವಿನ್ಯಾಸಕ್ಕನುಗುಣವಾಗಿ ಆನಂದಲಹರಿಯ ಕಲಾತ್ಮಕ ವಿನ್ಯಾಸದ ಚಲನೆಗಳನ್ನು ಸೃಷ್ಟಿಸಿದವು. ಕಾರ್ಮೋಡ ತುಂಬಿದ ಆಗಸದಿಂದ ಮಳೆಹನಿಗಳು ಟಪಟಪನೆ ನೆಲಕ್ಕುದುರಿದಂತೆ ಕಲಾವಿದೆಯರ ಗೆಜ್ಜೆಗಳ ಸಪ್ಪುಳ ರಿಂಗಣಗುಣಿಸಿತು. ಎದೆಮಟ್ಟ ತುಂಬಿಬಂದ ನೀರನ್ನ ಕಂಡು ಜನ ಆತಂಕಗೊಂಡಾಗ, ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನಗಿರಿಯನ್ನು ಎತ್ತಿ ಕಾಪಾಡಿದ ಪ್ರಸಂಗದಲ್ಲಿ ಸಾತ್ವಿಕಾಭಿನಯದ ಸೊಗಸು ಮಿಂಚಿತು. ಸೂಕ್ಷ್ಮಾಭಿವ್ಯಕ್ತಿಯ ತತ್ಕಾರಗಳ ಝೇಂಕಾರ, ಕಿವಿದುಂಬುವ ಕಿಂಕಿಣಿಯ ಸ್ವರಮಾಧುರ್ಯ, ತಾಳ ಸೌಂದರ್ಯವನ್ನು ಧ್ವನಿಸಿತು. ಲಂಗದ ಚುಂಗುಗಳನ್ನು ಹಿಡಿದು ಸಾಮರಸ್ಯದಲ್ಲಿ ಮೂಡಿಸಿದ ವಿವಿಧ ಆಯಾಮಗಳ ‘ತತ್ಕಾರ್’ ಗಳ ಝಣತ್ಕಾರ, ರಸಿಕರ ಮೆಚ್ಚುಗೆಯ ಕರತಾಡನ ಪಡೆಯಿತು.
ಮುಂದೆ-ಮೂಡಿಬಂದ ರಸಖಾನ್ ರಚನೆಯ ಕೀರ್ತನೆ ಸಂಕ್ಷಿಪ್ತವಾಗಿತ್ತು. ಗೋಕುಲದ ಗೋಪಿಕೆಯರನ್ನು ಕೃಷ್ಣ ತನ್ನ ತುಂಟಾಟಗಳಿಂದ ಕಾಡಿದ ಪ್ರಸಂಗಗಳು ಯುಗಳನೃತ್ಯದಲ್ಲಿ ರಮ್ಯವಾಗಿ ಅನಾವರಣಗೊಂಡವು. ಸಂಪದಾ ಪಿಳ್ಳೈ ತನ್ಮಯತೆಯಿಂದ ಅಭಿನಯಿಸಿದ ಬಿಂದಾದಿನ್ ಮಹಾರಾಜ್ ರಚನೆಯ ‘ಕೃಷ್ಣ ಭಜನ್’- ಕೃಷ್ಣನ ವಿವಿಧ ಸಾಹಸಗಾಥೆಗಳನ್ನು ನಿರೂಪಣೆ ಮನೋಜ್ಞವಾಗಿ ಮೂಡಿಬಂತು.
ರುಜುತಾ ಸೋಮನ್ ಪ್ರಸ್ತುತಪಡಿಸಿದ ‘ಪೂತನ ವಧ’- ಗತಭಾವ್ ಅಮೋಘವಾಗಿ ಅಭಿನಯಿಸಲ್ಪಟ್ಟಿತು. ಸಾಹಿತ್ಯವಿಲ್ಲದೆ, ಕೇವಲ ದೇಹಭಾಷೆಯ ಮೂಲಕ ಅಧಮ ನಾಯಿಕಾ ಪೂತನಿ, ಬಾಲಕೃಷ್ಣನನ್ನು ಸಂಹರಿಸಲು ಪ್ರಯತ್ನಿಸಿ, ತಾನೇ ಮೃತಳಾಗುವ ಪ್ರಸಂಗವನ್ನು ವಿಶಿಷ್ಟ ದೈಹಿಕ ಚಲನೆ, ಸಂಕೇತ, ಹಸ್ತ ಮುದ್ರೆಗಳು ಮತ್ತು ಮುಖಾಭಿವ್ಯಕ್ತಿಯಿಂದ ಸೊಗಸಾಗಿ ಅಭಿನಯಿಸಿದರು ರುಜುತಾ.
ಅನಂತರ-ಒಂದೇರಾಗದ ನಾಲ್ಕುವಿಧದ ಶಾಸ್ತ್ರೀಯ ಭಿನ್ನರೂಪಗಳಾದ ಖಯಾಲ್, ತರಾನಾ, ಸರ್ಗಂ ಮತ್ತು ತ್ರಿಪತ್ ಗಳಿಂದ ಕೂಡಿದ ‘ಬಂದೀಶ್’ ಈ ‘’ಚತುರಂಗ”. ನಾಲ್ಕುಬಂಧಗಳನ್ನು ಒಂದೇನೇಯ್ಗೆಯಲ್ಲಿ ಹೆಣೆದ ಕಾಮನಬಿಲ್ಲಿನ ರಮ್ಯಕೃತಿಗೆ ನೃತ್ಯಸಂಯೋಜಿಸಿದವರು ರುಜುತಾ. ಕಾರ್ಮೋಡ ಕವಿದ ಮಳೆಗಾಲದ ದಿನದಲ್ಲಿ ನಾಯಿಕೆ ವರ್ಷಾಗಮನ ಕಂಡು ಸಂಭ್ರಮದಿಂದ ನೃತ್ತಗಳಲ್ಲಿ ನರ್ತಿಸುತ್ತಾಳೆ. ಗರಿಬಿಚ್ಚಿ ನವಿಲ ನಡೆಯಲ್ಲಿ ಚಕ್ಕರಗಳನ್ನು ಹಾಕುತ್ತ, ತತ್ಕಾರಗಳಲ್ಲಿ ಗೆಜ್ಜೆದನಿಗೈಯುತ್ತ ಸಡಗರಿಸುತ್ತಾಳೆ. ತನ್ನ ಮುರಳಿಗಾನದಿಂದ ಮರುಳು ಮಾಡಿದ ಕೃಷ್ಣನ ಗಾನಸುಧೆಗೆ ಆಕರ್ಷಿತರಾಗಿ ಮೈಮರೆತ ದನ-ಕರು, ಗೋಪಿಕೆಯರ ತನ್ಮಯತೆಯನ್ನು ಸೆರೆಹಿಡಿದ ರುಜುತಾರ ‘’ಕೃಷ್ಣ ಭಜನ್’ನ ದೈವೀಕ ಅಭಿನಯ ಮನದುಂಬಿತು.
*************************
ವೈ.ಕೆ.ಸಂಧ್ಯಾ ಶರ್ಮ

Leave a Comment