ರವಿಚಂದ್ರನ್ ಕಂಡಂತೆ ಹೆಬ್ಬುಲಿ

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರವಾಗಿದೆ ‘ಹೆಬ್ಬುಲಿ’. ಚಿತ್ರದಲ್ಲಿ ಸುದೀಪ್ ಪ್ಯಾರಾ ಕಮ್ಯಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ.ಸುದೀಪ್‌ಗೆ ಅಣ್ಣನಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿರುವುದು ಮತ್ತೊಂದು ವಿಶೇಷ.

ಹಿಂದೆ ಮಾಣಿಕ್ಯ ಚಿತ್ರದಲ್ಲಿ ಇವರಿಬ್ಬರೂ ಅಪ್ಪ-ಮಗನಾಗಿ ಕಾಣಿಸಿಕೊಂಡು ಕಮಾಲ್ ಮಾಡಿದ್ದರು. ಈ ಬಗ್ಗೆ ರವಿಚಂದ್ರನ್‌ಗೆ ಕೇಳಿದರೆ, ನಾನು ಕ್ಯಾರೆಕ್ಟರ್ ರೋಲ್ ಮಾಡಲು ಶುರು ಮಾಡಿದ್ದು ಮಾಣಿಕ್ಯ ಚಿತ್ರದಿಂದ. ಅದರಲ್ಲಿ ಅಪ್ಪನಾಗಿದ್ದೆ, ಇದೀಗ ಹೆಬ್ಬುಲಿಯಲ್ಲಿ ಅಣ್ಣನಾಗಿದ್ದೇನೆ. ಆಮೇಲೆ ಮತ್ತೆ ಹೀರೋ ಆಗುತ್ತೇನೆ ಅಷ್ಟೇ ಎಂದು ನಗುತ್ತಾರೆ.

ಪ್ರತಿ ಸಿನಿಮಾದಲ್ಲಿ ನಾಯಕ-ನಾಯಕಿ ಕೆಮಿಸ್ಟ್ರಿ ಮ್ಯಾಚ್ ಆಗಬೇಕು ಎಂದು ಹೇಳುವುದು ಸಾಮಾನ್ಯ. ಆದರೆ, ಹೆಬ್ಬುಲಿ ವಿಷಯದಲ್ಲಿ ರವಿಚಂದ್ರನ್ ಹೇಳುವುದೇ ಬೇರೆ.  ಎಲ್ಲರೂ ಸಿನಿಮಾದಲ್ಲಿ ಹೀರೋ-ಹೀರೋಯಿನ್ ಕೆಮಿಸ್ಟ್ರಿ ಹೇಗಿತ್ತು ಎನ್ನುತ್ತಾರೆ. ಆದರೆ ಈ ಸಿನಿಮಾದಲ್ಲಿ ನನ್ನ ಮತ್ತು ಸುದೀಪ್ ನಡುವಿನ ಕೆಮಿಸ್ಟ್ರಿ ಇದೆ ಅದು ಚೆನ್ನಾಗಿದ್ದರೆ ಇದು ಮತ್ತೊಂದು ಮಾಣಿಕ್ಯ ಆಗಲಿದೆ ಎನ್ನುತ್ತಾರೆ.

ಹೆಬ್ಬುಲಿ ಜತೆ ಮೊದಲೂ ಇದ್ದೆ, ಈಗಲೂ ಇದ್ದೇನೆ, ಮುಂದೆಯೂ ಇರಲಿದ್ದೇನೆ ಎನ್ನುತ್ತಾರೆ ಅವರು. ನಿರ್ಮಾಪಕರಾದ ರಘುನಾಥ್ ಮತ್ತು ಉಮಾಪತಿ ಶ್ರೀನಿವಾಸ್ ಭರ್ಜರಿಯಾಗಿಯೇ ಈ ಚಿತ್ರಕ್ಕೆ ಖರ್ಚು ಮಾಡಿದ್ದಾರೆ. ಹಾಗಾಗಿಯೇ ಸ್ಯಾಂಡಲ್‌ವುಡ್‌ನಲ್ಲಿ ಇದು ಹೈ ಬಜೆಟ್ ಸಿನಿಮಾವೆಂದೇ ಸುದ್ದಿ ಮಾಡಿದೆ. ಆದರೆ, ರವಿಚಂದ್ರನ್ ತಮ್ಮದೇ ರೀತಿಯಲ್ಲಿ ವಿಶ್ಲೇಷಿಸುವುದು ಹೀಗೆ, ಎಲ್ಲರೂ ಇದನ್ನು ಹೈ ಬಜೆಟ್ ಸಿನಿಮಾ ಎಂದು ಹೇಳುತ್ತಿದ್ದಾರೆ. ಅದು ಸುಳ್ಳು! ಇದು ಓವರ್ ಬಜೆಟ್ ಸಿನಿಮಾ. ನಿರ್ಮಾಪಕರಿಬ್ಬರು ಸುದೀಪ್ ಮೇಲೆ ತುಂಬ ಪ್ರೀತಿ ಇಟ್ಟಿದ್ದಾರೆ ನಿರ್ದೇಶಕ ಕೃಷ್ಣ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಹಾಗಾಗಿಯೇ ಸಾಕಷ್ಟು ಖರ್ಚು ಮಾಡಿದ್ದಾರೆ. ಮಾಣಿಕ್ಯಕ್ಕಿಂತ ಜಾಸ್ತಿ ಯಶಸ್ಸು ಈ ಚಿತ್ರಕ್ಕೆ ಸಿಗಲಿ ಎಂದು ಶುಭ ಹಾರೈಸುತ್ತಾರವರು.

ಸುದೀಪ್ ಬಗ್ಗೆ ಮತ್ತವರ ನಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ಈಗಾಗಲೇ ಸುದೀಪ್ ನನ್ನ ದೊಡ್ಡ ಮಗನಿದ್ದಂತೆ ಎಂದು ಹೇಳಿದ್ದೇನೆ. ನಟನೆಯ ವಿಚಾರದಲ್ಲಿ ಅವರು ಟಾಪ್ ಸ್ಥಾನದಲ್ಲಿದ್ದಾರೆ. ಮುಂದೆ ಇನ್ನೂ ಯಾವ್ಯಾವ ವಿಭಾಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಷ್ಟೆ. ಸಿನಿಮಾವನ್ನು ತುಂಬ ಪ್ರೀತಿಸುವ ವ್ಯಕ್ತಿ ಅವರು. ನನ್ನ ಅಪೂರ್ವ ಚಿತ್ರಕ್ಕಾಗಿ ಶೂಟಿಂಗ್‌ಗೆ ಬಂದರು, ಒಂದು ದಿನ ಡಬ್ಬಿಂಗ್‌ಗೆ ಬಂದರು. ಡಬ್ ಮಾಡುವಾಗ ಅವರ ಧ್ವನಿ ಕೇಳಿ ಸ್ಟನ್ ಆದೆ. ಧ್ವನಿಯಿಂದ ಒಂದು ಪಾತ್ರವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದನ್ನು ಸುದೀಪ್ ಅವರಲ್ಲಿ ನೋಡಿದೆ ಎಂದು ಮುಕ್ತವಾಗಿ ಹೊಗಳಿದ್ದು ವಿಶೇಷವಾಗಿತ್ತು.

ಯಾವುದೇ ಚಿತ್ರ ತಡವಾಗಬಹುದು ಅದು ಮುಖ್ಯವಲ್ಲ ಸಿನೆಮಾ ಹೇಗೆ ಬಂದಿದೆ ಅದನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ಮುಖ್ಯ ಹೆಬ್ಬುಲಿ ನನ್ನ ಅಭಿನಯದ ೯೨ನೇ ಸಿನಿಮಾ ಅಷ್ಟು ಹೇಳಬಹುದು ಎನ್ನುತ್ತಾ ನಿರೂಪಕ ನವೀನನ ಪ್ರಶ್ನೆಗೆ ತಮ್ಮದೇ ದಾಟಿಯಲ್ಲಿ ರವಿಚಂದ್ರನ್ ಉತ್ತರಿಸಿದರು.

ಹೆಬ್ಬುಲಿಯ ಬಗ್ಗೆ ಮಾತನಾಡಿದ ಸುದೀಪ್ ಸಿನೆಮಾ ಜವಾಬ್ದಾರಿ ಎನ್ನುವುದು ತಂತ್ರಜ್ಞರು ಸೇರಿ ಇಡೀ ತಂಡದ ಮೇಲಿರುತ್ತದೆ ತಮ್ಮ ಕೆಲಸ ತಮಗೆ ಎನ್ನುವಂತಾದರೆ ಸರಿಯಾಗುವುದಿಲ್ಲ ಎಲ್ಲರೂ ಪ್ರೀತಿಯಿಂದ ಮಾಡಿದಾಗ ಅದು ಒಳ್ಳೆಯ ಸಿನೆಮಾ ಆಗಲಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.

ಒಂದು ಸಿನೆಮಾ ಅಂದರೆ ಅದು ಕುಟುಂಬ,ಪರಿಶ್ರಮ,ವಿಶ್ವಾಸ,ಭವಿಷ್ಯ ಎಲ್ಲವೂ ಇರಲಿದೆ ನಮಗೊ ಇನ್ನೊಂದು ಸಿನೆಮಾ ಅಷ್ಟೇ ಇದು ಗೆದ್ದರೂ ಸೋತರೂ ಮುಂದೆ ಸಿನೆಮಾ ಮಾಡಬೇಕಾಗುತ್ತದೆ ಅದರೆ ನಿರ್ಮಾಪಕರಿಗೆ ಇದು ಮುಖ್ಯ ಅವರಿಂದಾಗಿ ನನಗೆ ಹೆಬ್ಬುಲಿ ಇನ್ನಷ್ಟು ಹತ್ತಿರವಾಗಿದೆ ಎಂದು ಸುದೀಪ್ ತಮ್ಮ ಸಿನೆಮಾ ಬದ್ಧತೆಗೆ ಮಾತಾದರು.

Leave a Comment