ರಫೇಲ್ ಒಪ್ಪಂದ : ನಾಳೆ ಮತ್ತೊಂದು ಸುಪ್ರೀಂ ಕೋರ್ಟ್  ಅಂತಿಮ ತೀರ್ಪು

ನವದೆಹಲಿ, ನ, 13-  ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ಕಂಪನಿ ತಯಾರಿಸಿದ  36 ರಫೇಲ್ ಸಮರ  ವಿಮಾನಗಳ  ಖರೀದಿ ಸಂಬಂಧ  ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ಹಳೆಯ  ತೀರ್ಮಾನವನ್ನು ಮರುಪರಿಶೀಲಿಸಬೇಕೆಂಬ  ಮನವಿ ವಿಚಾರಣೆ ಮಾಡಿದ  ಸುಪ್ರೀಂ ಕೋರ್ಟ್ ಗುರುವಾರ( ನಾಳೆ )  ಅಂತಿಮ ತೀರ್ಪು ಪ್ರಕಟಿಸಲಿದೆ.

 ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ಈ ಪ್ರಕರಣದಲ್ಲಿ ಮೌಖಿಕ ವಿಚಾರಣೆಯನ್ನು ಮೇ ತಿಂಗಳಲ್ಲಿ ಪೂರ್ಣಗೊಳಿಸಿ ತನ್ನ ತೀರ್ಪನ್ನು ಈಗಾಗಲೇ  ಕಾಯ್ದಿರಿಸಿದೆ. ಮುಖ್ಯ ನ್ಯಾಯಮೂರ್ತಿ ಗೊಗೊಯ್ ಅವರ ಅಧಿಕಾರಾವಧಿ ಭಾನುವಾರ ಕೊನೆಗೊಳ್ಳುವ ಕೆಲವೇ ಗಂಟೆಗಳ  ಮೊದಲು ಗುರುವಾರ ಪರಿಶೀಲನಾ ಅರ್ಜಿಗಳ ಬಗ್ಗೆ ನ್ಯಾಯಪೀಠ ತೀರ್ಪು ನೀಡಲಿದೆ.

ಫ್ರಾನ್ಸ್‌ನ ಡಸಾಲ್ಟ್ ಕಂಪನಿ  ತಯಾರಿಸಿದ ಯುದ್ಧ ವಿಮಾನಗಳ ಖರೀದಿ ,   59ಸಾವಿರ  ಕೋಟಿ ರೂಪಾಯಿಗಳ  ಒಪ್ಪಂದದ ಕುರಿತು ನ್ಯಾಯಾಲಯ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಉನ್ನತ ನ್ಯಾಯಾಲಯ 2018 ರ ಡಿಸೆಂಬರ್ 14 ರಂದು ವಜಾಗೊಳಿಸಿತ್ತು.

ಆದರೆ ಮಾಜಿ ಮಂತ್ರಿಗಳಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಸರಕಾರ ಕೆಲವು ಮಹತ್ವದ ವಿಚಾರಗಳನ್ನು  ಮರೆಮಾಚಿದೆ ಎಂಬ  ಆಕ್ಷೇಪ  ವ್ಯಕ್ತಪಡಿಸಲಾಗಿತ್ತು .

ಈ ದಾಖಲೆಗಳು ಸೂಕ್ಷ್ಮವಾಗಿರುವುದರಿಂದ ಮತ್ತು ‘ಅನಧಿಕೃತ ಫೋಟೊಕಾಪಿಂಗ್ ಮತ್ತು ಸೋರಿಕೆ’ ಮೂಲಕ ಪಡೆಯಲಾಗಿದ್ದರಿಂದ ಈ ದಾಖಲೆಗಳನ್ನು ಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಆರಂಭದಲ್ಲಿ ವಾದಿಸಿತ್ತು. ಈ ವಾದವನ್ನು ಏಪ್ರಿಲ್ ನಲ್ಲಿ  ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು .

ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸುವ ಮೊದಲು ತನ್ನ ಅಂತಿಮ ವಾದಗಳಲ್ಲಿ, ರಫೇಲ್ ಪ್ರಕರಣವನ್ನು ಪುನಃ ತೆರೆಯುವುದನ್ನು ಸರ್ಕಾರ ವಿರೋಧಿಸಿ, ವಿಶ್ವದ ಯಾವುದೇ   ನ್ಯಾಯಾಲಯಗಳು ರಕ್ಷಣಾ ಖರೀದಿಗೆ ಸಂಬಂಧಿಸಿದ ಒಪ್ಪಂದಗಳನ್ನು ಪರಿಶೀಲಿಸುವುದಿಲ್ಲ ಎಂದು ಹೇಳಿತ್ತು .ಮುಖ್ಯ ನ್ಯಾಯಮೂರ್ತಿಗಳ ಪೀಠ  ಕಳೆದವಾರವಷ್ಟೆ ಶತಮಾಗಳಷ್ಟು ಹಳೆಯದಾದ  ಆಯೋಧ್ಯೆ  ಭೂಮಿ ವಿವಾದದ ಬಗ್ಗೆ ಅಂತಿಮ ತೀರ್ಪು   ಪ್ರಕಟಿಸಿತ್ತು.

Leave a Comment