ರಫೇಲ್ ಅವ್ಯವಹಾರ ಅಂಬಾನಿ ಮೋದಿ ಮಧ್ಯವರ್ತಿ ರಾಗಾ ವಾಗ್ದಾಳಿ

ನವದೆಹಲಿ, ಫೆ. ೧೨- ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಮಧ್ಯವರ್ತಿಯಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಕಾರ್ಯನಿರ್ವಹಿಸುವ ಮೂಲಕ ದೇಶದ್ರೋಹವೆಸಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಗಮನಕ್ಕೆ ಬಾರದೆ ಈ ವ್ಯವಹಾರ ಉದ್ಯಮಿ ಅನಿಲ್ ಅಂಬಾನಿ ಅವರಿಗೆ ತಿಳಿದಿತ್ತು. ಇದು ಅಧಿಕೃತ ರಹಸ್ಯಗಳ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರನ್ನು ಜೈಲಿಗೆ ಕಳುಹಿಸಬೇಕೆಂದು ಒತ್ತಾಯಿಸಿದರು.
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ನರೇಂದ್ರಮೋದಿ ಅವರು ಅಂಬಾನಿಯವರಿಗೆ ಮೊದಲೇ ತಿಳಿಸಿದ್ದರು ಎಂದು ಆರೋಪಿಸಿರುವ ಅವರು, ಇದೊಂದು ದೇಶದ್ರೋಹದ ಕೃತ್ಯ ಎಂದು ತಿಳಿಸಿದ್ದಾರೆ.
2015ರಲ್ಲಿ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡುವ ಕೆಲ ದಿನಗಳ ಮುಂಚಿತವಾಗಿ ಅನಿಲ್ ಅಂಬಾನಿ ಅವರು ಫ್ರಾನ್ಸ್ ರಕ್ಷಣಾ ಸಚಿವರನ್ನು ಭೇಟಿಯಾಗಿದ್ದರು ಎಂದು ಫ್ರೆಂಚ್ ಅಧಿಕಾರಿ ರವಾನಿಸಿರುವ ಇ-ಮೇಲ್ ಸಂದೇಶವನ್ನು ಉಲ್ಲೇಖಿಸಿ, ರಾಹುಲ್ ವಿವರ ನೀಡಿದ್ದಾರೆ.
ರಫೇಲ್ ಯುದ್ಧ ವಿಮಾನ ಖರೀದಿ ಕುರಿತಂತೆ ಮಹಾಲೆಕ್ಕಪಾಲರ ವರದಿಯನ್ನು ತಿರಸ್ಕರಿಸುವುದಾಗಿ ರಾಹುಲ್ ಹೇಳಿದರು.

Leave a Comment