ರಫಾಯಲ್ ವಿಮಾನ ಖರೀದಿ ತನಿಖೆ ಆಗ್ರಹಿಸಿ ಧರಣಿ

ನವದೆಹಲಿ, ಆ. ೧೦- ರಫಾಯಲ್ ವಿಮಾನ ಖರೀದಿ ಒಪ್ಪಂದದ ಬಗ್ಗೆ ಸಂಸತ್ತಿನ ಜಂಟಿ ಸಮಿತಿಯಿಂದ ತನಿಖೆ ನಡೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ಇಂದು ಸಂಸತ್‌ನ ಹೊರಗೆ ಧರಣಿ ನಡೆಸಿದವು.
ಸಂಸತ್‌ನ ಮಳೆಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದು, ರಫಾಯಲ್ ಹಗರಣದ ಬಗ್ಗೆ ತನಿಖೆಯಾಗಬೇಕು ಮತ್ತು ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರಮೋದಿ ಈ ಒಪ್ಪಂದದ ಬಗ್ಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದವು.
ಸಂಸತ್ತಿನ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಬಳಿ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಧರಣಿ ನಡೆಸಿದ ಕಾಂಗ್ರೆಸ್, ಎಡಪಕ್ಷ, ಆರ್‌ಜೆಡಿ ಮತ್ತು ಆಮ್‌ಆದ್ಮಿ ಪಕ್ಷಗಳ ಸಂಸದರು ರಫಾಯಲ್ ವಿಮಾನ ಖರೀದಿ ಹಗರಣ ದೇಶದ ದೊಡ್ಡ ಹಗರಣವಾಗಿದೆ. ಈ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಫ್ರಾನ್ಸ್‌ನಿಂದ ವಿಮಾನ ಖರೀದಿಯ ಈ ಹಗರಣದಲ್ಲಿ ಅಕ್ರಮ ನಡೆದಿದೆ ಎಂದು ಘೋಷಣೆ ಕೂಗಿದ ಧರಣಿ ನಿರತ ಸಂಸದರು, ಪ್ರಧಾನಿ ಮೋದಿ ಸಂಸತ್ತಿನಲ್ಲಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ರಫಾಯಲ್ ವಿಮಾನ ಖರೀದಿ ಹಗರಣ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಬಿತ್ತಿ ಪತ್ರ, ಫಲಕಗಳನ್ನು ಪ್ರದರ್ಶಿಸಿದ ಸಂಸದರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು.
ಈ ಧರಣಿಯಲ್ಲಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯ ಕಾಂಗ್ರೆಸ್ ನಾಯಕ ಗುಲಾಬ್ ನಬೀ ಆಜಾದ್, ಸಂಸದರಾದ ರಾಜ್‌ಗಬ್ಬರ್, ಆನಂದ್‌ಶರ್ಮ, ಅಂಬಿಕಾಸೋನಿ, ಸಿಪಿಐನ ಸಂಸದ ಡಿ. ರಾಜಾ, ಆಮ್‌ಆದ್ಮಿ ಪಕ್ಷದ ಸಂಸದ ಸುನಿಲ್ ಗುಪ್ತ ಸೇರಿದಂತೆ ಹಲವು ಸಂಸದರು ಪಾಲ್ಗೊಂಡಿದ್ದರು.
@12bc = ನಿಲುವು ಸ್ಪಷ್ಟ
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎ ಅಧಿನಾಯಕಿ ಸೋನಿಯಾಗಾಂಧಿ, ತ್ರಿವಳಿ ತಲಾಕ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ ಎಂದು ಹೇಳಿ, ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.

Leave a Comment