ರದ್ದಾದ ಪಂದ್ಯಗಳಿಗೆ ಮೀಸಲು ದಿನಗಳಿಡುವುದು ಟೂರ್ನಿಯ ನಿರ್ವಹಣೆಗೆ ಕಷ್ಟ: ಐಸಿಸಿ ಸಿಇಓ

 ಲಂಡನ್‌, ಜೂ 12 – ಮಂಗಳವಾರ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ, ಮಳೆಯಿಂದ ರದ್ದಾದ ಪಂದ್ಯಗಳಿಗೆ ಮೀಸಲು ದಿನಗಳನ್ನು ವಿಧಿಸುವುದರಿಂದ  ಐಸಿಸಿ ವಿಶ್ವಕಪ್‌ ಟೂರ್ನಿಯ ನಿರ್ವಹಣೆ ದುಸ್ವಪ್ನವಾಗಲಿದೆ ಎಂದು ಐಸಿಸಿ ತಿಳಿಸಿದೆ.

ಕಳೆದ ಸೋಮವಾರ ಸೌಥ್‌ಹ್ಯಾಮ್ಟನ್‌ನಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಪಂದ್ಯ ಪ್ರತಿಕೂಲ ಹವಮಾನದಿಂದಾಗಿ ರದ್ದಾಗಿತ್ತು. ಅಲ್ಲದೇ, ಮಂಗಳವಾರ ಬ್ರಿಸ್ಟಲ್‌ನಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ ನಡುವಿನ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಯಿತು. ಜತೆಗೆ, ಜೂ. 7 ರಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಪಂದ್ಯವೂ ಮಳೆಯಿಂದ ರದ್ದಾಗಿತ್ತು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಮೂರು ಪಂದ್ಯಗಳು ಮಳೆಯಿಂದ ರದ್ದಾದಂತಾಯಿತು.

“ಪ್ರತಿಯೊಂದು ಪಂದ್ಯಕ್ಕೂ ಮೀಸಲು ದಿನ ನೀಡುವುದರಿಂದ ಐಸಿಸಿಯು ಟೂರ್ನಿಯ ಅವಧಿಯನ್ನು ವಿಸ್ತರಿಸುವುದು ಅಗತ್ಯವಾಗಿರುತ್ತದೆ. ಅಲ್ಲದೇ, ಇದನ್ನು ಪ್ರಾಯೋಗಿಕವಾಗಿ ತರುವುದು ಕೂಡ ಕಷ್ಟವಾಗಲಿದೆ” ಎಂದು ಐಸಿಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇವಿಡ್‌ ರಿಚರ್ಡ್‌ಸನ್‌ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

” ಮೀಸಲು ದಿನಗಳಿಗೆ ಮೊರೆ ಹೋದರೆ ಇದು ಟೂರ್ನಿಯ ಸ್ವಭಾವದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಪಿಚ್‌ ಸಿದ್ಧತೆ, ತಂಡದ ಚೇತರಿಕೆ, ಪ್ರಯಾಣದ ದಿನಗಳು, ಸೌಕರ್ಯ ಮತ್ತು ಸ್ಥಳ ಲಭ್ಯತೆ, ಪಂದ್ಯಾವಳಿಯ ಸಿಬ್ಬಂದಿ, ಸ್ವಯಂ ಸೇವಕ ಸಿಬ್ಬಂದಿ, ಟೂರ್ನಿಯ ಅಧಿಕಾರಿಗಳ ಲಭ್ಯತೆ, ಪಂದ್ಯ ವೀಕ್ಷಣೆಯ ಪ್ರೇಕ್ಷಕರ ಪ್ರಯಾಣ ಇವುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಗುಂಪು ಹಂತದ ಮೀಸಲು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಅಗತ್ಯವಿರುತ್ತದೆ.” ಎಂದು ವಿವರಿಸಿದ್ದಾರೆ.

”  ನಿರ್ವವಹಣೆ ಹಾಗೂ ನೇರಪ್ರಸಾರದ ಸೇರಿದಂತೆ ಒಂದು ಪಂದ್ಯವನ್ನು ಯಶಸ್ವಿಯಾಗಿಸುವಲ್ಲಿ ಸುಮಾರು 1,200 ಮಂದಿ ನಿಯೋಜನೆಗೊಂಡಿರುತ್ತಾರೆ. ಹಾಗಾಗಿ ಗುಂಪು ಹಂತದ ಪಂದ್ಯಗಳಿಗೆ ಮೀಸಲು ದಿನ ಇಡುವುದರಿಂದ ಹೆಚ್ಚು ಸಿಬ್ಬಂದಿ ಅಗತ್ಯವಿರುತ್ತದೆ. ಹಾಗಾಗಿ, ಗುಂಪು ಹಂತದ 45 ಪಂದ್ಯಗಳಿಗೆ ಮೀಸಲು ದಿನಗಳನ್ನು ಗುರುತಿಸುವುದು ಕಷ್ಟ. ಆದರೆ,  ನೌಕೌಟ್‌ ಹಂತದಲ್ಲಿ ನಾವು ಮೀಸಲು ದಿನಗಳನ್ನು ಇಟ್ಟಿದ್ದೇವೆ” ಎಂದು ಹೇಳಿಕೆ ತಿಳಿಸಿದೆ.

ಸಾಮಾನ್ಯವಾಗಿ ಇಂಗ್ಲೆಂಡ್ನಲ್ಲಿ ಇದೀಗ ಬೇಸಿಗೆ. ಆದರೆ, ಕಳೆದ ಕೆಲವು ದಿನಗಳಿಂದ ಜೂನ್‌ ತಿಂಗಳಲ್ಲಿ ಎರಡು ಬಾರಿ ಮಳೆ ಆಗಿದೆ. ಇದು ಅಸಹಜ ವಾತಾವರಣವನ್ನು ಗುರುತಿಸುತ್ತದೆ. ಕಳೆದ ವರ್ಷ  ಜೂನ್‌ನಲ್ಲಿ ಇಲ್ಲಿ ಕೇವಲ 2 ಮಿ.ಮೀ ಮಳೆಯಾಗಿತ್ತು.  ಆದರೆ, ಕಳೆದ 24 ಗಂಟೆಗಳಿಂದ ಇಂಗ್ಲೆಂಡ್‌ ಆಗ್ನೇಯ ಭಾಗದಲ್ಲಿ 100 ಮಿ.ಮೀ ಮಳೆಯಾಗಿದೆ ಎಂದು  ರಿಚರ್ಡ್‌ಸನ್‌ ಇದೇ ವೇಳೆ ಉಲ್ಲೇಖಿಸಿದ್ದಾರೆ.

Leave a Comment