ರಣಜಿ: ಮುಂಬೈ ತಂಡ ಸೇರಿದ ಅಜಿಂಕ್ಯಾ ರಹಾನೆ, ಪೃಥ್ವಿ ಶಾ

ನವದೆಹಲಿ, ಡಿ 3 – ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಯಶಸ್ವಿಯಾಗಿ ಮುಗಿಸಿದ ಬಳಿಕ ಭಾರತ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಮುಂಬೈ ಪರ ರಣಜಿ ಟ್ರೋಫಿ ಆಡಲು ಸಜ್ಜಾಗುತ್ತಿದ್ದಾರೆ.

2019-2020ರ ಆವೃತ್ತಿಯ ರಣಜಿ ಟ್ರೋಫಿಯ ಬರೋಡಾ ವಿರುದ್ಧದ ಮೊದಲನೇ ಪಂದ್ಯಕ್ಕೆ 15 ಆಟಗಾರರ ಮುಂಬೈ ತಂಡವನ್ನು ಮಂಗವಾರ ಪ್ರಕಟಿಸಲಾಗಿದೆ. ತಂಡದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಅಜಿಂಕ್ಯ ರಹಾನೆ ಹಾಗೂ ಯುವ ಆಟಗಾರ ಪೃಥ್ವಿ ಶಾ ಕಾಣಿಸಿಕೊಂಡಿದ್ದಾರೆ.

41 ಬಾರಿ ದೇಶೀಯ ಪ್ರತಿಷ್ಠಿತ ಟೂರ್ನಿ ಚಾಂಪಿಯನ್ ಮುಂಬೈ ತಂಡ ಪ್ರಸಕ್ತ ಆವೃತ್ತಿಯ ಮೊದಲನೇ ಪಂದ್ಯವನ್ನು ಡಿ. 9 ರಿಂದ ಬರೋಡಾ ವಿರುದ್ಧ ವಡೋದರಾದಲ್ಲಿ ಸೆಣಸಲಿದೆ. ತಂಡವನ್ನು ಸೂರ್ಯ ಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಅನುಭವಿ ವಿಕೆಟ್ ಕೀಪರ್ ಆದಿತ್ಯ ತಾರೆ ಉಪ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ರಾಷ್ಟ್ರೀಯ ತಂಡದಲ್ಲಿರುವ ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ಅವರನ್ನು ರಣಜಿ ತಂಡಕ್ಕೆ ಪರಿಗಣಿಸಿಲ್ಲ. ಮುಂದಿನ ವರ್ಷ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಇನ್ನೂ ಎರಡು ತಿಂಗಳು ಅವಧಿ ಅಂತರ ಇರುವ ಕಾರಣ ಅಜಿಂಕ್ಯ ರಹಾನೆ ರಣಜಿ ಟ್ರೋಫಿ ಆಡಲಿದ್ದಾರೆ. ಆ ಮೂಲಕ ತಮ್ಮ ಲಯವನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವತ್ತ ತಮ್ಮ ಚಿತ್ತ ಹರಿಸಲಿದ್ದಾರೆ.

ಮುಂಬೈ: ಸೂರ್ಯ ಕುಮಾರ್ ಯಾದವ್ (ನಾಯಕ), ಆದಿತ್ಯ ತಾರೆ (ಉಪ ನಾಯಕ), ಅಜಿಂಕ್ಯ ರಹಾನೆ, ಪೃಥ್ವಿ ಶಾ, ಜಯ್ ಬಿಸ್ತಾ, ಶಭಂ ರಂಜನೆ, ಆಕಾಶ್ ಪರ್ಕರ್, ಸರ್ಫರಾಜ್ ಖಾನ್, ಶ್ಯಾಮ್ಸ್ ಮುಲಾನಿ, ವಿನಾಯಕ್, ಶಶಾಂಕ್, ಶಾರ್ದೂಲ್ ಠಾಕೂರ್, ತುಷಾರ್ ದೇಶ್‍ಪಾಂಡೆ, ಧವಳ್ ಕುಲಕರ್ಣಿ ಹಾಗೂ ಏಕಾಂತ್ ಕರ್ಕರ್.

Leave a Comment