ರಜಿನಿ ರಾಜಕೀಯ ಪ್ರವೇಶ

ಚೆನ್ನೈ, ಮೇ ೧೭- ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹಲವು ವರ್ಷಗಳಿಂದ ರಜನಿಕಾಂತ್ ಅವರನ್ನು ರಾಜಕೀಯಕ್ಕೆ ಕರೆತರಬೇಕು ಎಂದು ಹಲವು ಪಕ್ಷಗಳು ನಾನಾ ಕಸರತ್ತು ಮಾಡಿದ್ದರೂ ಯಾವುದಕ್ಕೂ ಜಗ್ಗದ ತಲೈವಾ ಇದೀಗ ತಮಿಳುನಾಡಿನ ಜನರ ಸಂಕಷ್ಟಗಳನ್ನು ಮನಗಂಡು ಅವರಿಗೆ ಏನಾದರೂ ಮಾಡಬೇಕು ಎನ್ನುವ ಆಸೆಯಿಂದ ರಾಜಕೀಯ ಪ್ರವೇಶಿಸುವ ಮುನ್ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಚೆನ್ನೈನ ನಿವಾಸದಲ್ಲಿ ಏಳೆಂಟು ವರ್ಷಗಳ ಬಳಿಕ ಅಭಿಮಾನಿಗಳನ್ನು ಭೇಟಿಯಾದ ಸಂದರ್ಭದಲ್ಲಿ ಜನರ ನೋವು-ಕಷ್ಟ, ದುಃಖ-ದುಮ್ಮಾನಗಳನ್ನು ಅರಿತು ರಾಜಕೀಯಕ್ಕೆ ಪ್ರವೇಶಿಸುವ ಒಲವು ತೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ತಲೈವಾ ರಜನೀಕಾಂತ್, ರಾಜಕೀಯಕ್ಕೆ ಬರುವ ಬಗ್ಗೆ ಇನ್ನು ನಿರ್ಧಾರ ಕೈಗೊಂಡಿಲ್ಲ. ಆದರೆ, ತಮಿಳುನಾಡು ಜನರು ಅನುಭವಿಸುತ್ತಿರುವ ಕಷ್ಟ ಕೋಟಲೆಗಳನ್ನು ನೋಡಿದರೆ ರಾಜಕೀಯ ಪ್ರವೇಶಿಸಬೇಕು ಎನಿಸುತ್ತಿದೆ.

ಅದು ಯಾವಾಗ, ಏನು ಎನ್ನುವುದು ಇನ್ನು ನಿರ್ಧಾರವಾಗಿಲ್ಲ. ರಾಜಕೀಯ ಪ್ರವೇಶಿಸಲು `ಬಾಬಾ’ನಿಂದ ಯಾವಾಗ ಪ್ರೇರಣೆಯಾಗುತ್ತದೋ ಮರುದಿನವೇ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ದಾರೆ.

ಇದರಿಂದಾಗಿ ಹಲವು ರಾಜಕೀಯ ಪಕ್ಷಗಳು ರಜನಿಕಾಂತ್ ಅವರನ್ನು ತಮ್ಮ ತಮ್ಮ ಪಕ್ಷಗಳಿಗೆ ಸೆಳೆದುಕೊಳ್ಳಲು ಕಸರತ್ತು ನಡೆಸಿದ್ದಾರೆ. ಆದರೆ, ರಜನಿಕಾಂತ್ ಯಾವ ಪಕ್ಷದ ಕಡೆ ಹೋಗುತ್ತೇನೆ ಎನ್ನುವ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ತಮಿಳುನಾಡಿನಲ್ಲಿರುವ ವಿವಿಧ ರಾಜಕೀಯ ಪಕ್ಷಗಳಲ್ಲಿ ಯಾವುದಾದರು ಪಕ್ಷ ಸೇರುತ್ತಾರಾ? ಇಲ್ಲವೇ ಅವರೇ ಹೊಸ ಪಕ್ಷ ಕಟ್ಟುತ್ತಾರಾ ಎನ್ನುವ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ರಜನಿಕಾಂತ್ ಆಪ್ತಮಿತ್ರ, ರಾಜ್‌ಬಹದ್ದೂರ್, ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅದು ಯಾವಾಗ ಎನ್ನುವುದು ಇನ್ನೂ ನಿಗೂಢ. ಸರಿ ಸುಮಾರು 2 ಸಾವಿರ ವರ್ಷಗಳಿಂದ ಅನ್ನ-ನೀರು ಇಲ್ಲದೆ, ಗಾಳಿಯನ್ನೇ ಸೇವಿಸಿ ಹಿಮಾಲಯದ ಗುಹೆಯಲ್ಲಿ ಬದುಕುತ್ತಿದ್ದಾರೆ ಎನ್ನಲಾದ ಬಾಬಾ ಅವರಿಂದ ಪ್ರೇರಣೆಯಾದರೆ ಮರುದಿನವೇ ರಾಜಕೀಯಕ್ಕೆ ಬರಲಿದ್ದಾರೆ.

ಈ ಬಗ್ಗೆ ಮಾತನಾಡುವಾಗ ರಜನಿಕಾಂತ್, ತಮ್ಮ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ರಾಜಕೀಯಕ್ಕೆ ರಜನಿ ಬರಲು ಬಾಬಾ ಪ್ರೇರಣೆಯಾಗಬೇಕಾಗಿದೆ ಎಂದು ಹೇಳಿದ್ದಾರೆ.

Leave a Comment