ರಚನಾತ್ಮಕ ಕಾರ್ಯಗಳು ನಿಂತ ನೀರಾಗದಿರಲಿ

ಮೈಸೂರು, ಜ.13- ರಚನಾತ್ಮಕ ಕಾರ್ಯಕ್ರಮಗಳು ಹರಿಯುವ ನೀರಾಗಬೇಕೇ ಹೊರತು, ನಿಂತ ನೀರಾಗಬಾರದು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅಭಿಪ್ರಾಯಪಟ್ಟರು.
ಇಂದು ಮಧ್ಯಾಹ್ನ ಖಾಸಗಿ ಹೋಟೆಲ್ ನಲ್ಲಿ ರಾಜೀವ್ ಸ್ನೇಹ ಬಳಗದ ವತಿಯಿಂದ ಆಯೋಜಿಸಿದ್ದ ಅಜಾತ ಶತ್ರು ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಪರಿಕಲ್ಪನೆಯ ಕಾರ್ಯಕ್ರಮಗಳು ನಿಂತ ನೀರಾಗದೆ ಸದಾ ಹರಿಯುತ್ತಿರಲಿ. ಇದರಿಂದ ಪರಿಸರ ಸಂರಕ್ಷಣೆ, ಆರೋಗ್ಯವಂತ ಸಮಾಜ ಕಾಣಲು ಸಾಧ್ಯವಾಗುತ್ತದೆ. ಬಿಜೆಪಿ ಮುಖಂಡ ರಾಜೀವ್ ನೇತೃತ್ವದಲ್ಲಿ ಸುಮಾರು 200 ಕ್ಕೂ ಹೆಚ್ಚು ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮಗಳು ನಗರದಲ್ಲಿ ನಡೆದಿರುವುದು ಶ್ಲಾಘನೀಯ ಎಂದರು.
ಸಮಾಜದಲ್ಲಿ ಯುವಕರಿಗೆ ಬದ್ಧತೆ ಬಹಳ ಮುಖ್ಯ. ಯಾವುದೇ ಕೆಲಸ ಕೈಗೊಂಡರು ಅದರಲ್ಲಿ ಶ್ರದ್ಧೆ, ವಿಶ್ವಾಸ, ಅನುಭೂತಿ ಬಹಳ ಮುಖ್ಯ. ಸತತ ಪರಿಶ್ರಮದಿಂದ ಗುರಿ ಸಾಧಿಸಲು ಸಾಧ್ಯ. ಸಾಮಾಜಿಕ ಅವ್ಯವಸ್ಥೆಯಲ್ಲಿ ಸ್ವಚ್ಛತೆ ಒಂದು ಜನಾಂಗಕ್ಕೆ ಸೀಮಿತವಾಗಬಾರದು. ಇದು ಎಲ್ಲರ ಜವಾಬ್ದಾರಿಯಾಗಬೇಕು. ಪೊರಕೆ ಹಿಡಿದು ಪರಿಸರ ಸ್ವಚ್ಛಗೊಳಿಸಿದರೆ ಆರೋಗ್ಯವಂತ ಸಮಾಜದ ಜೊತೆಗೆ ಮಾನಸಿಕ ವೃದ್ಧಿಯು ಆಗುವುದಲ್ಲದೇ ದೇಶವು ಪ್ರಗತಿಯತ್ತ ಸಾಗಲು ಕಾರಣವಾಗುತ್ತದೆ. ಇದು ಮಹಾತ್ಮ ಗಾಂಧೀಜಿಯವರ ಮಹತ್ತರವಾದ ಪರಿಕಲ್ಪನೆ. ಇಂದಿನ ಯುವಜನತೆ ಇದನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ನಾನು ಕಂದಾಯ ಇಲಾಖೆ ಮಂತ್ರಿಯಾಗಿದ್ದಾಗ ಕೇಂದ್ರದ ಕಾರ್ಯಕ್ರಮವಾದ ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದ್ದೇನೆ. ವಿರೋಧ ಪಕ್ಷದಲ್ಲಿದ್ದರು ಕೇಂದ್ರದ ಸಾಮಾಜಿಕ ಬದಲಾವಣೆಯ ಕಾರ್ಯಕ್ರಮಕ್ಕೆ ಸಾತ್ ನೀಡಿದೆನು. ಪ್ರಧಾನಮಂತ್ರಿಯವರ ಮನ್ ಕೀ ಬಾತ್ ಕಾರ್ಯಕ್ರಮ ನನಗೆ ಅಚ್ಚು ಮೆಚ್ಚು. ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬುದೇ ನನ್ನ ಆಶಯ. ರಾಜೀವ್ ರವರು ಸ್ವಚ್ಛ ಭಾರತ ಅಭಿಯಾನದ ಮೂಲಕ ಸಮಾಜದ ಸ್ವಾಸ್ಥ್ಯವನ್ನು ತೊಡೆದು ಹಾಕಿ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ. ಶಿಕ್ಷಣ ಹಾಗೂ ಸಹಕಾರ ಕ್ಷೇತ್ರದಲ್ಲಿ ಅವರ ಸೇವೆ ಅನನ್ಯವಾದದ್ದು, ಸಮಾಜಕ್ಕೆ ಅವರ ಕೊಡುಗೆ ಮುಂದುವರೆಯಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಶಿವಣ್ಣ, ಜಿಲ್ಲಾ ಬಿಜೆಪಿ ನಗರ ಘಟಕ ಅಧ್ಯಕ್ಷ ಡಾ.ಮಂಜುನಾಥ್, ಪ್ರೊ.ವೆಂಕೋಬರಾವ್, ಕೆ.ಆರ್.ಮೋಹನ್ ಕುಮಾರ್, ಹೆಚ್.ವಿ ರಾಜೀವ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Comment