ರಂಜಾನ ಸಂಭ್ರಮ ಕಸಿದ ಕೊರೋನಾ

 

(ಹಟ್ಟಿ ನಜೀರ್‍ಮಿಯಾನ್)

ಕಲಬುರಗಿ,ಮೇ.24- ಪವಿತ್ರ ರಂಜಾನ ಹಬ್ಬದ ಮುನ್ನಾದಿನ  ಎರಡು ದಿನಗಳಲ್ಲಿ ಇಲ್ಲಿನ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಸಂಭ್ರಮದ ಖರೀದಿಗೆ ಇಂದು ಮಂಕು ಬಡಿದಿರುವುದು ಇತಿಹಾಸಲ್ಲಿಯೇ ಪ್ರಥಮ.

ಮುಸ್ಲೀಂ ಸಮಾಜ ಬಾಂಧವರು, ಪ್ರತಿವರ್ಷದಂತೆ ತಮ್ಮ ಪವಿತ್ರ ರಂಜಾನ ಹಬ್ಬವನ್ನು ಬಹು ಉತ್ಸಾಹದಿಂದ ಆಚರಿಸಲು ಹಬ್ಬದ ಮುನ್ನ ಚಾಂದ್ ರಾತ್ರಿಯ ದಿನದಂದು ಹಗಲು ರಾತ್ರಿ ನಡೆಸುತ್ತಿದ್ದ ಸಂಭ್ರಮದ ಖರೀದಿಯೂ ಇಲ್ಲಿನ ಮಾರುಕಟ್ಟೆಗೆ ಕಳೆ ತಂದು ಕೊಡುತ್ತಿತ್ತು. ಲಾಕ್‍ಡೌನ್ ಪರಿಣಾಮವಾಗಿ ಇಡಿ ಮಾರುಕಟ್ಟೆ ಇಂದು ಬಿಕೋ ಎನ್ನುವಂತಾಗಿವೆ.

ಮಹಾಮಾರಿ ಕೊರೋನಾ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದಾಗಿ ಲಾಕ್‍ಡೌನ್ ಮತ್ತು ನಿಷೇಧಾಜ್ಷೆ ಜಾರಿಯಿಂದ ಈ ವರ್ಷದ ಹಬ್ಬದ ಸಂಭ್ರಮಕ್ಕೆ ಮಂಕು ಬಳಿದಿದೆ. ಹೊಸ ಬಟ್ಟೆ ಖರೀದಿ ಸೇರಿದಂತೆ ಈದ್ ಉಲ್ ಫಿತ್ರ್ ಹಬ್ಬದ ದಿನಸಿಗಳ ಖರೀದಿಗಳಿಲ್ಲದೇ ಮಾರುಕಟ್ಟೆ ಬಣಗುಡುತ್ತಿದೆ.

ಕಳೆದ ಮಾರ್ಚ 10, 2020 ರಿಂದ ಇಲ್ಲಿನ ಮಾರುಕಟ್ಟೆ ಅಂಗಡಿ ಮುಗ್ಗಟ್ಟುಗಳ ಬಾಗಿಲುಗಳಿಗೆ ಹಾಕಿರುವ ಬೀಗವನ್ನು ಇಲ್ಲಿಯವರೆಗು ತೆರೆಯಲಾಗಿಲ್ಲ. ಮಹಾನಗರದ ಹೃದಯ ಭಾಗದ ಸುಪರ ಮಾರುಕಟ್ಟೆ ತನ್ನ ಕಳೆಯನ್ನು ಕಳೆದುಕೊಂಡು ಮಂಕಾಗಿ ಹೋಗಿದೆ.

ಭಾನುವಾರದ ಪೂರ್ಣ ಲಾಕ್‍ಡೌನ್ ಹಿನ್ನಲೆಯಲ್ಲಿ ಇಂದು ರಸ್ತೆಗಳು ಸಹ ಬಿಕೋ ಎನ್ನುತ್ತಿದ್ದು, ಹಾಲು, ತರಕಾರಿ ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಿರುವ ಹಿನ್ನಲೆಯಲ್ಲಿ ನಾಳೆ ಆಚರಿಸಲಿರುವ ಈದ್ ಉಲ್ ಫಿತ್ರ್ ಹಬ್ಬದ ದಿನಸಿಗಳ ಖರೀದಿಗೆ ಹಿನ್ನಡೆಯಾಗಿದೆ. ಬಹುತೇಕವಾಗಿ ಜಿಲ್ಲೆಯ ಎಲ್ಲ ತಾಲೂಕು ಮತ್ತು ಹಳ್ಳಿಗಳಲ್ಲೂ  ಇದೆ ಪರಿಸ್ಥಿತಿ ಮುಂದುವರೆದಿದೆ.

ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಇಲ್ಲಿನ ಮಾರುಕಟ್ಟೆಯ ವ್ಯಾಪಾರಸ್ಥರು ಹಬ್ಬ ಹರಿದಿನಗಳಲ್ಲಿ ಭರ್ಜರಿ ಆಧಾಯ ಮಾಡಿಕೊಳ್ಳುತ್ತಿದ್ದರು. ಈ ವರ್ಷದ ರಂಜಾನ ಹಬ್ಬವು ವರ್ತಕರಿಗೆ ಹಾನಿಯನ್ನುಂಟು ಮಾಡಿದೆ.

ಕಪಡಾ ಬಜಾರ್, ಚಪ್ಪಲ್ ಬಜಾರ್, ಮೆಹಂದಿ, ಬಳೆ, ಅಲಂಕಾರಿಕ ಸಾಮಗ್ರಿಗಳು, ಡ್ರೈಫುಡ್, ಹಣ್ಣು ಹಂಪಲು, ಖಜೂರ, ವಿಶೇಷವಾಗಿ ಚಿಕನ್, ಮಟನ್ ಮತ್ತು ಶೀರಕುಂಬ ದಿನಸುಗಳ ಖರಿದಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹಿನ್ನಡೆಯಾಗಿದೆ.

ಹಬ್ಬದ ಈ ಶುಭ ಸಂದರ್ಭದಲ್ಲಿ ತಮ್ಮ ಬಂಧು ಬಳಗ ಹಾಗೂ ಸ್ನೇಹಿತರನ್ನು ಮನೆಗಳಿಗೆ ಆಹ್ವಾನಿಸಿ ಅವರಿಗೆ ರಂಜಾನ ಹಬ್ಬದ ಶೀರಕುಂಬ, ಬಿರಿಯಾನಿ ಯಂತಹ ಭೂರಿ ಭೋಜನವನ್ನು ಮಾಡಿಸುವುದಕ್ಕೂ ಈ ಕೊರೋನಾ ಮಹಾಮಾರಿ ಅಡ್ಡಗಾಲು ಹಾಕಿದೆ.

ಕೈಮಿಲಾಯಿಸಿ ಅಪ್ಪಿಕೊಂಡು ಪರಸ್ಪರ ಶುಭಾಶಯಗಳನ್ನು ಹೇಳುವಂತಿಲ್ಲ. ಒಟ್ಟಿನಲ್ಲಿ ಈ ವರ್ಷದ ರಂಜಾನ ಹಬ್ಬಕ್ಕೆ ಯಾವುದೇ ಉತ್ಸಾಹ ಮತ್ತು ಸಂಭ್ರಮವಿಲ್ಲದೆ ಆಚರಿಸಿಕೊಳ್ಳಲು ಮುಸ್ಲೀಮ ಬಾಂಧವರು ನಿರ್ಧರಿಸಿದ್ದಾರೆ. ಫೋನ್ ಮೂಲಕ ತಮ್ಮ ಬಂಧುಗಳಿಗೆ, ಆತ್ಮೀಯ ಸ್ನೇಹಿತರಿಗೆ ಹಬ್ಬದ ಶುಭಾಶಯಗಳನ್ನು ಹಂಚಿಕೊಳ್ಳಲಿರುವ ಇವರು, ನಾಳಿನ ತಮ್ಮ ವಿಶೇಷ ಪ್ರಾರ್ಥನೆಯಲ್ಲಿ ಕೊರೋನಾ ಮಹಾಮಾರಿಯಿಂದ ನಮ್ಮ ರಾಷ್ಟ್ರವನ್ನು ಮುಕ್ತಗೊಳಿಸುವಂತೆ ಆ ಅಲ್ಲಾಹನಲ್ಲಿ ಪ್ರಾರ್ಥಿಸುವುದಾಗಿ ಹೇಳುತ್ತಾರೆ..

Share

Leave a Comment