ರಂಜಾನ್: ಅಂಗಡಿ ತೆರೆಯಲು ಅವಕಾಶ ನೀಡಲು ಆಗ್ರಹ

ತುಮಕೂರು, ಮೇ ೨೨- ರಂಜಾನ್ ಆಚರಣೆಗೆ ಕೇಂದ್ರ ಸರ್ಕಾರದ ನಿಯಮಾವಳಿಗಳು ವಿರುದ್ಧವಾಗಿದ್ದು, ಮುಸ್ಲಿಂರ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಲು ಸರ್ಕಾರ ಭಾನುವಾರ ನಿಯಾಮಾವಳಿಗಳನ್ನು ಸಡಿಲಗೊಳಿಸಬೇಕೆಂದು ಆಗ್ರಹಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅತೀಕ್ ಅಹಮದ್ ತಿಳಿಸಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿರುವ ಎಲ್ಲ ನಿಯಮಗಳನ್ನು ಮುಸ್ಲಿಂ ಸಮುದಾಯ ಪಾಲಿಸುತ್ತಿದ್ದು, ಲಾಕ್‍ಡೌನ್-4ರಲ್ಲಿನ ನಿಯಮಾವಳಿಯಂತೆ ಪ್ರತಿ ಭಾನುವಾರ ಸಂಪೂರ್ಣ ಲಾಕ್‍ಡೌನ್‍ಗೆ ನಿಯಾಮಾವಳಿಗಳನ್ನು ರೂಪಿಸಿದ್ದು, ಪವಿತ್ರ ರಂಜಾನ್ ಆಚರಣೆಗೆ ಅಡಚಣೆಯಾಗಿ ಪರಿಣಮಿಸಿದೆ ಎಂದರು.
ಹಬ್ಬದ ಮುನ್ನಾ ದಿನವಾದ ಭಾನುವಾರ ಅಂಗಡಿಗಳನ್ನು ತೆರಯಲು ನಿಷೇಧ ವಿಧಿಸಿರುವುದರಿಂದ ಹಬ್ಬದ ಸಂಭ್ರಮ ಕಡಿಮೆಯಾಗಲಿದ್ದು, ಅಮೀರ್-ಎ- ಶರಿಯತ್ ನೀಡಿರುವ ಕರೆಯಂತೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುತ್ತೇವೆ. ಆದರೆ ಹಬ್ಬದ ಆಚರಣೆಗೆ ಭಾನುವಾರದ ಲಾಕ್‍ಡೌನ್ ಅಡ್ಡಿಯಾಗಲಿದ್ದು, ರಂಜಾನ್ ಹಿನ್ನೆಲೆಯಲ್ಲಿ ನಿಯಾಮಾವಳಿಯನ್ನು ಸಡಿಲಿಸುವಂತೆ ಒತ್ತಾಯಿಸಿದರು.
ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ನೀಡುತ್ತಿಲ್ಲ. ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ ಹಬ್ಬದ ಆಚರಣೆಯನ್ನು ಮಾಡಿಕೊಳ್ಳುತ್ತೇವೆ. ಆದರೆ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವ ದೃಷ್ಠಿಯಿಂದ ಭಾನುವಾರ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಆಚರಣೆಗೆ ರೂಪಿಸಿರುವ ನಿಯಮಾವಳಿಗೆ ಬದ್ಧವಾಗಿ ಹಬ್ಬವನ್ನು ಮನೆಯಲ್ಲಿ ಮುಸ್ಲಿಂ ಸಮುದಾಯವರು ಆಚರಿಸಲಿದ್ದು, ಸರ್ಕಾರ ಭಾನುವಾರದ ಲಾಕ್‍ಡೌನ್ ನಿಯಮಾವಳಿಯನ್ನು ಸಡಿಲಿಸಿ ಹಬ್ಬವನ್ನು ಆಚರಿಸಲು ಅಂಗಡಿಗಳನ್ನು ತೆರೆಯಲು ಅನುಕೂಲ ಮಾಡಿಕೊಡಲಿದೆ ಎನ್ನುವ ಭರವಸೆಯನ್ನು ಅವರು ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಸೈಯದ್ ಮುದಾಸೀರ್, ತುಮಕೂರು ಜನಸೇವಾ ಸಮಿತಿ ಜಿಲ್ಲಾಧ್ಯಕ್ಷ ಮೊಹ್ಮದ್ ಶಮೀಲ್, ತಾಲ್ಲೂಕು ಅಧ್ಯಕ್ಷ ಇ.ಎಸ್.ದಾದಾಪೀರ್, ಸಮೀರ್.ಕೆ. ಮತ್ತಿತರರು ಉಪಸ್ಥಿತರಿದ್ದರು.

Leave a Comment