ರಂಗ ಕಲಾವಿದರ ಮಾಹಿತಿ  ಸಂಗ್ರಹಕ್ಕೆ ಅಕಾಡೆಮಿ ಕ್ರಮ

ಬೆಂಗಳೂರು, ನ.೧೦-ರಾಜ್ಯದ ಎಲ್ಲಾ ಜಿಲ್ಲೆಗಳ ರಂಗಭೂಮಿ ಕಲಾವಿದರ ಪೂರ್ಣ ಮಾಹಿತಿ ಸಂಗ್ರಹಕ್ಕೆ ರಾಜ್ಯ ನಾಟಕ ಅಕಾಡೆಮಿ ಕ್ರಮ ಕೈಗೊಂಡಿದೆ ಎಂದು ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪೋಷಕ ನಟ ವೈಜನಾಥ್ ಬಿರಾದಾರ ಹೇಳಿದರು.

ನಗರದಲ್ಲಿಂದು ಸ್ವಾತಂತ್ರ್ಯ ಉದ್ಯಾನ ಬಯಲು ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದವತಿಯಿಂದ ಹಮ್ಮಿಕೊಂಡಿದ್ದ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ರಂಗಭೂಮಿ ಬೆಳವಣಿಗೆಗೆ ಬದ್ಧವಾಗಿದ್ದು, ಶೀಘ್ರದಲ್ಲೇ ಅಕಾಡೆಮಿ ಅಧ್ಯಕ್ಷರೊಂದಿಗೆ ಸಭೆ ನಡೆಯಲಿದ್ದು, ಅನುದಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಸಾಪ ಬೆಂ.ಜಿಲ್ಲಾಧ್ಯಕ್ಷ ಮಾಯಾಣ್ಣ ಮಾತನಾಡಿ, ಗ್ರಾಮೀಣ ಬದುಕಿನಲ್ಲಿ ನಿತ್ಯದ ದುಡಿಮೆಯೊಂದಿಗೆ ಆಟ ನಾಟಕ ನತ್ಯಾದಿಗಳನ್ನು ಜೀವಕ್ಕೆ ಹೊಂದಿಕೊಂಡು ಆಡುವ ಅಭ್ಯಾಸಗಳು ಪುನರುತ್ಥಾನವಾಗಬೇಕಾಗಿದೆ. ಗ್ರಾಮೀಣ ಸೊಗಡು ನಮ್ಮ ಸಂಬಂಧಗಳನ್ನು ಇನ್ನಷ್ಟು ಹತ್ತಿರಗೊಳಿಸಬೇಕಾಗಿದೆ. ಬದುಕೆಂದರೆ ಪ್ರೀತಿ ವಾತ್ಸಲ್ಯಗಳೊಂದಿಗೆ ದಿನಗಳನ್ನು ಹನ್ಮನ ತುಂಬಿ ಸಂತಸದಿಂದ ಕಳೆಯುವುದು ಎಂದಾಗಬೇಕಿದೆ. ಅದಕ್ಕಾಗಿ ನಮ್ಮ ಜನಪದದ ಮೂಲ ಸತ್ವದತ್ತ ಮತ್ತೆ ನಾವು ಚಿತ್ತ ಬೆಳೆಸಬೇಕಾಗಿದೆ ಎಂದರು.

ಮಾನವನ ಜೀವನವೇ ಒಂದು ಸಿನಿಮಾ, ಆ ಸಿನಿಮಾದಲ್ಲಿ ನಾವೆಲ್ಲರೂ ಪಾತ್ರದಾರಿಗಳು. ಹೊಸ ಮಾಧ್ಯಮದಿಂದ ರಂಗ ಕಲೆಯ ವಿನಾಶದ ಅಂಚಿಗೆ ಸಾಗುತ್ತಿರುವ ಸಮಯದಲ್ಲಿ ಸಿನಿಮಾ ಮತ್ತು ಕಲಾವಿದರನ್ನು ಉಳಿಸುವ ಮೂಲಕ ಕಲೆ ಉಳಿಸು ಮುಂದಾಗಿರುವ ಕಲಾವಿದರ ಶ್ರಮ ಶ್ಲಾಘನೀಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ, ರಂಗಕರ್ಮಿ ಆ.ಶ್ರೀನಿವಾಸ್, ನವನೀತಾ, ಗುಬ್ಬಿ ನಟರಾಜ್, ಗ.ಸದಾನಂದ ಸ್ವಾಮಿ ಸೇರಿದಂತೆ ಪ್ರಮುಖರಿದ್ದರು.

Leave a Comment