ರಂಗಭೂಮಿ ನನ್ನ ಹೊಟ್ಟೆಗೆ ಹಿಟ್ಟು ಹಾಕಿದೆ: ಆಲ್ದಾಳ್ ಮನದಾಳದ ಮಾತು

ಕಲಬುರಗಿ,ಆ.25-“ರಂಗಭೂಮಿ ನನ್ನ ಹೊಟ್ಟೆಗೆ ಹಿಟ್ಟು ಹಾಕಿದೆ. ಆ ಹಿಟ್ಟೆ ನನ್ನನ್ನು ಗಟ್ಟಿಯಾಗಿಸಿದೆ” ಎಂದು ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಕರ್ಮಿ ಲಾಲ್ ಅಹ್ಮದ್ ಬಂದೇನವಾಜ್ ಖಲೀಫ್ (ಎಲ್.ಬಿ.ಕೆ.) ಆಲ್ದಾಳ್ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿಂದು ಹಮ್ಮಿಕೊಂಡಿದ್ದ 22ನೇ ಮನದಾಳದ ಮಾತು ಕಾರ್ಯಕ್ರಮದಲ್ಲಿ ಆಲ್ದಾಳ್ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು.

” ಸಿಂದಗಿ ತಾಲ್ಲೂಕಿನ ಬನ್ನಟ್ಟಿ ಗ್ರಾಮದಲ್ಲಿ ಜನಿಸಿದೆ. ಮೂರು ವರ್ಷಕ್ಕೆ ತಂದೆಯನ್ನು ಕಳೆದುಕೊಂಡು ತಾಯಿಯ ತವರು ಮನೆಯಾದ ಆಲ್ದಾಳ್ ದಲ್ಲಿ ಸೋದರ ಮಾವ, ತದನಂತರ ಮಳ್ಳಿ ಗ್ರಾಮದಲ್ಲಿರುವ ಚಿಕ್ಕಮ್ಮನ ಆಸರೆಯಲ್ಲಿ ಬೆಳೆದೆ. ಏಳನೇ ತರಗತಿಯವರೆಗೆ ಓದಿದರೂ ಸೋದರಮಾವ ಡಪ್ಪಿನಾಟ, ಬಯಲಾಟ ಮತ್ತು ಹಾಡಕಿ ಪದಗಳನ್ನು ಹಾಡುತ್ತಿದ್ದುದ್ದರಿಂದ ಅವರ ಪ್ರಭಾವಕ್ಕೆ ಒಳಗಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದೆ. ಮೊದಲಿಗೆ ಟೈಲರಿಂಗ್ ವೃತ್ತಿ ಮತ್ತು ಬಟ್ಟೆ ವ್ಯಾಪಾರ ಮಾಡುತ್ತಿದ್ದರೂ ರಂಗಭೂಮಿ ನಾಟಕಗಳಲ್ಲಿ ಅಭಿನಯಿಸುವುದು, ನಾಟಕ ರಚಿಸುವುದು ಪ್ರವೃತ್ತಿಯನ್ನಾಗಿ ಮಾಡಿಕೊಂಡೆ. ಕನಕಾಂಗಿ ನಾಟಕದಲ್ಲಿ ಶ್ರೀಕೃಷ್ಣನ ಪಾತ್ರಕ್ಕೆ ಬಣ್ಣ ಹಚ್ಚುವುದರ ಮೂಲಕ ನಾಟಕದಲ್ಲಿ ಅಭಿಯಿಸುವುದಕ್ಕೆ ಕಾಲಿಟ್ಟೆ. ಪತಿಭಕ್ತಿ ನಾನು ಬರೆದ ಮೊದಲ ನಾಟಕ. ವಿಶ್ವರಾಧ್ಯರ ಕುರಿತು ಬರೆದ ವಿಶ್ವರಾಧ್ಯ ನಾಟಕ ನಾಡಿನ ತುಂಬೆಲ್ಲಾ ಪ್ರದರ್ಶನಗೊಂಡ ಕೀರ್ತಿ ಹೆಚ್ಚಿಸಿತು. ಕಡಕೋಳ ಮಡಿವಾಳೇಶ್ವರ ಕುರಿತು ಬರೆದ ನಾಟಕ ಯಡ್ರಾಮಿಯಲ್ಲಿ ನೂರಕ್ಕೂ ಹೆಚ್ಚು ಪ್ರಯೋಗ ಕಂಡಿತು. ಈ ಮಧ್ಯೆ ಬದುಕಿನಲ್ಲಿ ಅನೇಕ ಏಳು-ಬೀಳುಗಳನ್ನು ಕಂಡರೂ ನಾಟಕ ರಚನೆ ಮುಂದುವರಿಸಿದೆ. ರಂಗಭೂಮಿ ಕಲಾವಿದರ ಬದುಕು ಕಷ್ಟದ ಕುಲುಮೆ ಇದ್ದಹಾಗೆ. ತನ್ನೆಲ್ಲಾ ಕಷ್ಟ ನೋವುಗಳನ್ನು ಮರೆತು ಕಲಾವಿದ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುವುದರ ಮೂಲಕ ಪ್ರೇಕ್ಷಕರ ಮನ ತಣಿಸುವುದು ಸುಲಭದ ಮಾತಲ್ಲ. ನಾನು ಬರೆದ ಶರಣರ ಶಿವಯೋಗಿಗಳ ನಾಟಕಗಳಲ್ಲಿ ಅಭಿನಯಿಸಿದ ಹಲವರು ತಮ್ಮ ಬದುಕಿನಲ್ಲಿ ಪರಿವರ್ತನೆ ತಂದುಕೊಂಡಿದ್ದು ನನಗೆ ಸಂತೃಪ್ತಿ ತಂದಿದೆ. ಹಲವಾರು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ನನ್ನದೆಯಾದ ಒಂದು ನಾಟಕ ಕಂಪನಿ ಕಟ್ಟಿಕೊಂಡು ಕೈಸುಟ್ಟುಕೊಂಡೆ. ಇದ್ದ ಮೂರು ಎಕರೆ ಜಮೀನೂ ಕಳೆದುಕೊಂಡು ಕಂಗಾಲಾದೆ” ಎಂದು ತಮ್ಮ ರಂಗಭೂಮಿ ಬದುಕಿನ ಏಳುಬೀಳುಗಳನ್ನು ಬಿಚ್ಚಿಟ್ಟರು.

“ಇಷ್ಟೆಲ್ಲಾ ಆದರೂ ನನ್ನ ಬದುಕು ಮೂರಕ್ಕೆ ಏರಲಿಲ್ಲ. ಆರಕ್ಕೆ ಇಳಿಯಲಿಲ್ಲ. ರಂಗಭೂಮಿಯೇ ನನ್ನ ಜೀವಾಳವಾಗಿತ್ತು. ನಾಟಕಗಳೇ ನನಗೆ ಧೈರ್ಯ ತುಂಬಿದವು. ಮನುಷ್ಯನಿಗೆ ಕಷ್ಟಗಳು ಬೇಕು. ಮನುಷ್ಯ ಕಷ್ಟಗಳ ಕುಲುಮೆಯಲ್ಲಿ ಬೆಂದಾಗಲೆ ಸ್ಪುಟವಾದ ಚಿನ್ನವಾಗಿ ಹೊರಹೊಮ್ಮಲು ಸಾಧ್ಯ. ಕಡಿಕೋಳ ಮಡಿವಾಳೇಶ್ವರರ ಕುರಿತು ಬರೆದ ನಾಟಕ ನನ್ನೆದೆಯನ್ನು ಗಟ್ಟಿಯಾಗಿಸಿತು. ನಾನು ತುಂಬಾ ಸಿಟ್ಟಿನ ಮನುಷ್ಯನಾಗಿದ್ದೆ. ನಾಟಕಗಳಿಂದ ನನ್ನಲ್ಲಿದ್ದ ಸಿಟ್ಟನ್ನು ಕಳೆದುಕೊಂಡೆ. ರಂಗಭೂಮಿ ನನಗೆ ಸಾಕಷ್ಟು ನೀಡಿದೆ. ಗುಬ್ಬಿವೀರಣ್ಣ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯಂತ ಸ್ಥಾನಮಾನ ದೊರೆತಿದೆ. ನಮಸ್ಕಾರ ನಾಟಕ ಗುವಿವಿಯಲ್ಲಿ ಎಂ.ಎ.ಪಠ್ಯಪುಸ್ತಕವಾದುದ್ದು, ನನ್ನ ರಂಗಭೂಮಿ ಬುದುಕಿನ ಕುರಿತು ಒಬ್ಬ ವಿದ್ಯಾರ್ಥಿ ಪಿ.ಹೆಚ್.ಡಿ, ಇಬ್ಬರು ಎಂ.ಫಿಲ್ ಮಾಡಿದ್ದಾರೆ. 76 ಪುಸ್ತಕ ಪ್ರಕಟವಾಗಿವೆ. ಮಠ, ಮಾನ್ಯಗಳು ಆದರಿಸಿ ಗೌರವಿಸಿವೆ. ಎಲ್ಲರ ಮನುಸುಗಳನ್ನು ಗೆದ್ದಿದ್ದೇನೆ ಅಷ್ಟು ಸಾಕು. ಮನುಷ್ಯ ಗಳಿಸುವುದೆಂದರೆ ಏನು ಗಳಿಸುತ್ತಾನೆ” ಎಂದು ಪ್ರಶ್ನಿಸುವುದರ ಮೂಲಕ ತಮ್ಮ ವೃತ್ತಿ ರಂಗಭೂಮಿ ಸಂತೃಪ್ತಿಯನ್ನು ಹಂಚಿಕೊಂಡರು.

ಬಿರುದುಬಾವಲಿಗಳಿಗಾಗಿ ಸಾಹಿತ್ಯ ಬರೆಯಲಿಲ್ಲ. ಆ ಪ್ರಮೇಯ ನನಗಿರಲಿಲ್ಲ. ಸಮಾಜ, ಸಂಘ ಸಂಸ್ಥೆಗಳು ನನ್ನ ಅಲ್ಪ ಸಾಹಿತ್ಯ ಸೇವೆಯನ್ನು ಗುರುತಿಸಿ ಮೇಲೆತ್ತಿವೆ. ಬಿರುದು ಸನ್ಮಾನಗಳು ಮನೆಬಾಗಿಲಿಗೆ ಬಂದು ಅಪ್ಪಿಕೊಂಡಿವೆ. ಇದಕ್ಕೆ ಸಾಕ್ಷಿಯಾದ ಎಲ್ಲರಿಗೂ ಋಣಿಯಾಗಿದ್ದೇನೆ. ನಾನು ಯಾವ ಶಾಲಾ ಕಾಲೇಜುಗಳ ಪರೀಕ್ಷೆ ಬರೆದವನಲ್ಲ. ಬದುಕಿನ ನಿಜವಾದ ಪರೀಕ್ಷೆ ಎದುರಿಸಿದ್ದೇನೆ. ಇದರಲ್ಲಿ ನಾನು ಉತ್ತೀರ್ಣನೋ, ಅನ್ನುತ್ತೀರ್ಣನೋ ನೀವೇ ಹೇಳಬೇಕು, ನೀವು ನೀಡುವ ಅಂಕಪಟ್ಟಿಯೇ ನನ್ನ ನಿಜವಾದ ಸಾಧನೆ ಎಂದು ಮಾರ್ಮಿಕವಾಗಿ ನುಡಿಯುವುದರ ಮೂಲಕ ಮನದಾಳದ ಮಾತಿಗೆ ವಿರಾಮ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿದ್ದರು. ಸಿ.ಎಸ್.ಮಾಲಿಪಾಟೀಲ ಪ್ರಾರ್ಥನಾಗೀತೆ ಹಾಡಿದರು. ಮಡಿವಾಳಪ್ಪ ನಾಗರಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಡಾ.ವಿಜಕುಮಾರ ಪರೂತೆ ಕಾರ್ಯಕ್ರಮ ನಿರೂಪಿಸಿದರು. ತಮ್ಮಣ್ಣ ಹೂಗಾರ ವಂದಿಸಿದರು.

ಡಾ.ಸ್ವಾಮಿರಾವ ಕುಲಕರ್ಣಿ, ರವೀಂದ್ರ ಕರ್ಜಗಿ, ರಾಚಣ್ಣ ಕರದಳ್ಳಿ, ನರಸಿಂಗರಾವ ಹೇಮನೂರ, ಅಶೋಕ ತೋಟ್ನಳ್ಳಿ, ಡಾ.ಕೆ.ಎಸ್.ಬಂಧು, ಸುರೇಶ ಬಡಿಗೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Comment