ಯೋಧರ ಅನ್ನಕ್ಕೆ ಕನ್ನ

ನವದೆಹಲಿ, ಜ.೧೧: ದೇಶ ಕಾಯುವ ಯೋಧರಿಗೆ ಕಡಿಮೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೆ ಯೋಧರ ಪಡಿತರ ಪದಾರ್ಥಗಳನ್ನು ಸೇನಾಧಿಕಾರಿಗಳು ಸಾರ್ವಜನಿಕರಿಗೆ ಅರ್ಧ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಜಮ್ಮು ಕಾಶ್ಮೀರದ ಬಿಎಸ್‌ಎಫ್ ಶಿಬಿರದಿಂದ ಅಲ್ಲಿನ ಅಧಿಕಾರಿಗಳು ಪಡಿತರ ಮತ್ತು ಇಂಧನವನ್ನು ಅಲ್ಲಿನ ಸ್ಥಳೀಯ ನಿವಾಸಿಗಳಿಗೆ ಅರ್ಧ ಬೆಲೆಗೆ ಮಾರಿದ್ದಾರೆ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ಬಿಎಸ್‌ಎಫ್‌ನ ೨೯ನೇ ಬೆಟಾಲಿಯನ್‌ನ ಯೋಧ ತೇಜ್ ಬಹದ್ದೂರ್ ಅವರು ವಿಡಿಯೋವೊಂದರಲ್ಲಿ ಅವರಿಗೆ ನೀಡುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ವಿವರಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಸೇನೆ ಮತ್ತು ಸೈನಿಕರ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುವ ಕೇಂದ್ರ ಸರ್ಕಾರ ಅವರನ್ನು ನಡೆಸಿಕೊಳ್ಳುವ ರೀತಿಯನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು.

ಈ ಸಂದರ್ಭದಲ್ಲೇ ಸೈನಿಕರ ಆಹಾರ ಪದಾರ್ಥ ಮಾರಾಟವಾಗುತ್ತಿರುವ ವಿಷಯ ಬೆಳಕಿಗೆ ಬಂದಿರುವುದರಿಂದ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಮುಜುಗರದ ಪರಿಸ್ಥಿತಿ ಎದುರಿಸುವಂತಾಗಿದೆ.

ಶ್ರೀನಗರ ವಿಮಾನನಿಲ್ದಾಣದ ಸಮೀಪ ಇರುವ ಹಮ್‌ಹಮ ಬಿಎಸ್‌ಎಫ್ ಕೇಂದ್ರ ಕಚೇರಿಯ ಸಮೀಪ ಇರುವ ಅಂಗಡಿಯವರೊಬ್ಬರಿಗೆ ಸೇನೆಯ ಅಧಿಕಾರಿಗಳು ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಮಾರಾಟ ಮಾಡಿದ್ದಾರೆ. ಅದೇ ರೀತಿ ಇನ್ನೊಂದು ಅಂಗಡಿಗೆ ಆಹಾರಪದಾರ್ಥವನ್ನು ರ್‍ಯಾಂಕ್ ದರ್ಜೆಯ ಅಧಿಕಾರಿಯೊಬ್ಬರು ಮಾರಾಟ ಮಾಡಿದ್ದಾರೆ.

ಹಮ್‌ಹಮ ಪ್ರಾಂತ್ಯದ ಮೇಲ್ವಿಚಾರಣಾ ಬಿಎಸ್‌ಎಫ್ ಅಧಿಕಾರಿಗಳಿಂದ ತಾವು ಕಡಿಮೆ ಬೆಲೆಗೆ ಪೆಟ್ರೋಲ್ ಖರೀದಿಸಿದ್ದೇವೆ. ಅದೇ ರೀತಿ ಅಕ್ಕಿ, ಸಾಂಬಾರ ಪದಾರ್ಥಗಳನ್ನು ಅವರಿಂದ ಪಡೆದಿದ್ದೇವೆ ಎಂದು ಸಿವಿಎಲ್ ಕಾಂಟ್ರಾಕ್ಟರ್ ಹೇಳಿದ್ದಾರೆ. ಅದೇ ರೀತಿ ಸೈನಿಕರು ಬಳಸಬೇಕಿದ್ದ ಅತ್ಯುತ್ತಮ ಫರ್ನೀಚರ್‌ಗಳನ್ನು ಕೂಡ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಪತಿ ಆರೋಪದಲ್ಲಿ ತಪ್ಪಿಲ್ಲ:
ಗಡಿ ಕಾಯುವ ಸೈನಿಕರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ವಿಡಿಯೋ ಹರಿಬಿಟ್ಟ ಯೋಧ ತೇಜ್ ಬಹದ್ದೂರ್ ಯಾದವ್ ಬೆಂಬಲಕ್ಕೆ ನಿಂತಿರುವ ಪತ್ನಿ ಶರ್ಮಿಳಾ, ಪತಿ ಯಾದವ್ ಮಾಡಿರುವ ಆರೋಪ ಸತ್ಯ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ.

ನನ್ನ ಪತಿ ಹೇಳಿರುವುದು ಸತ್ಯ. ಇದರಲ್ಲಿ ಯಾವುದೇ ತಪ್ಪಿಲ್ಲ. ಅವರು ಗುಣಮಟ್ಟದ ಆಹಾರಕ್ಕಾಗಿ ಒತ್ತಾಯ ಮಾಡಿದ್ದಾರೆ. ಇದು ತಪ್ಪೇ ಎಂದು ಶರ್ಮಿಳಾ ಪ್ರಶ್ನಿಸಿದ್ದಾರೆ.

ಅಲ್ಲದೇ, ನನ್ನ ಪತಿ ಮಾನಸಿಕ ಅಸ್ವಸ್ಥ ಎನ್ನುವ ಮೂಲಕ ಆತನ ಘನತೆಗೆ ಧಕ್ಕೆ ತರಲಾಗುತ್ತಿದೆ. ಮಾನಸಿಕ ಅಸ್ವಸ್ಥ ಎಂದರೆ ಆತನಿಂದ ಏಕೆ ಕೆಲಸ ಮಾಡಿಸಿಕೊಳ್ಳುತ್ತಿದ್ದೀರಿ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕೆಂದು ಯೋಧನ ಪತ್ನಿ ಶರ್ಮಿಳಾ ಒತ್ತಾಯಿಸಿದ್ದಾರೆ. ಇನ್ನು, ಈ ಘಟನೆ ನಂತರ ಪತಿಯ ಸಂಪರ್ಕಕ್ಕೆ ಯತ್ನಿಸಿದರೂ ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ನನ್ನ ಪತಿಯನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ ನಾನು ನನ್ನ ಮಗನನ್ನು ಸೇನೆ ಸೇರಿಸುವುದಿಲ್ಲ. ಮೊದಲು ನನ್ನ ಮಗನನ್ನು ಸೇನೆಗೆ ಸೇರಿಸಬೇಕೆಂದಿದ್ದೆ. ಆದರೆ ಈಗ ಆ ಮನಸ್ಸಿಲ್ಲ. ನನ್ನ ಮಗನಿಗೂ ಸೇನೆ ಸೇರಲು ಇಷ್ಟವಿಲ್ಲ ಎಂದು ಶರ್ಮಿಳಾ ಹೇಳಿದರು.

Leave a Comment