ಯೋಗಾನರಸಿಂಹ ದೇಗುಲದಲ್ಲಿ ವಿಶಿಷ್ಟ ಆಚರಣೆ

ಮೈಸೂರಿನ ವಿಜಯನಗರದ ಶ್ರೀಯೋಗಾನರಸಿಂಹ ದೇಗುಲದಲ್ಲಿ ಜನವರಿ ಒಂದರಂದು ಜಾತಿಭೇದವಿಲ್ಲದೆ ಎರಡು ಲಕ್ಷ ಭಕ್ತರಿಗೆ ಸವಿಸವಿಯಾದ ಲಡ್ಡನ್ನು ಉಚಿತ ಪ್ರಸಾದವಾಗಿ ಹಂಚಿ ಹೊಸ ವರ್ಷದ ಸಡಗರವನ್ನು ಧರ್ಮ ಸಾಮರಸ್ಯದೊಂದಿಗೆ ಅಪೂರ್ವ ರೀತಿಯಲ್ಲಿ ಮೆರೆಯುತ್ತಾರೆ. ೧೦ ವರ್ಷಗಳಿಂದ ಅನೂಚಾನವಾಗಿ ನಡೆದು ಬಂದಿರುವ ಈ ವಿನೂತನ ಆಕರ್ಷಣೆ ವರ್ಷವರ್ಷವೂ ಜನರನ್ನು ಅತ್ಯಧಿಕ ಸಂಖ್ಯೆಯಲ್ಲಿ ಸೆಳೆಯುತ್ತಿದೆ. ವಿಶ್ವಶಾಂತಿ, ಭ್ರಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆ ಹಾಗೂ ನಾಡಿನ ಜನರ ಒಳಿತಿಗಾಗಿ ತಮ್ಮದೇ ಪರಿಕಲ್ಪನೆಯಲ್ಲಿ ಹೊಸವರ್ಷವನ್ನು ಆಚರಿಸುವ ಮೂಲಕ ಭಕ್ತರಲ್ಲಿ ಸದ್ಬಾವನೆ ಮೂಡಿಸುವ ಈ ಪ್ರಯತ್ನ ಸಾಂಸ್ಕೃತಿಕ ನಗರಿಯ ಆಸಕ್ತಿಕರ ಪ್ರಶಂಸೆಗೆ ಪಾತ್ರವಾಗಿದೆ.

ಕ್ರಿಸ್ತ ವರ್ಷಾರಂಭವನ್ನು ಸಂಭ್ರಮಿಸಲು ನಾಡಿನೆಲ್ಲೆಡೆ ಸಿದ್ಧತೆಗಳು ನಡೆದಿವೆ. ಅದರಲ್ಲೂ ಹೊಸವರ್ಷಕ್ಕೆ ವೈವಿಧ್ಯಮ ಕೇಕ್‌ಗಳನ್ನು ತಯಾರಿಸುವಲ್ಲಿ ಹೋಟೇಲ್‌ಗಳು, ಬೇಕರಿಗಳು ಮಗ್ನವಾಗಿವೆ. ಹೊಸ ವರ್ಷವನ್ನು ಹೇಗೆಲ್ಲಾ ಆಚರಿಸಬೇಕೆಂದು ಯುವಕ-ಯುವತಿಯರು ಆಗಲೇ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಸಂಸ್ಕೃತಿ ನಮ್ಮದು. ಹಾಗಾಗಿ ಕ್ರಿಸ್ತವರ್ಷ ನಮಗಲ್ಲ ಎಂದು ದೂರವಿರುವ ಸ್ವಭಾವ ನಮ್ಮದಲ್ಲ, ‘ಸಂತಸಕ್ಕೆ ಸಕಾರಣವಿದ್ದರೆ ಸಾಕು’ ಎಂಬ ಮನೋಭಾವ. ಕ್ರಿಸ್ತವರ್ಷವನ್ನು ಅಪ್ಪಿಕೊಳ್ಳುವುದರ ಜತೆಗೆ ಹಿಂದೂ ಸಂವತ್ಸರದ ಪ್ರಕಾರ ಹೊಸವರ್ಷಕ್ಕೆ ನಾಂದಿ ಹಾಡುವ ಯುಗಾದಿಯನ್ನೂ ಅಷ್ಟೇ ಸಡಗರದಿಂದ ಆಚರಿಸುವುದನ್ನೂ ನಾವು ಎಂದೂ ಮರೆಯುವುದಿಲ್ಲ, ಇದು ಜನಸಾಮಾನ್ಯರಿಗೆ ಸಂಬಂಧಿಸಿದ ಸಂಗತಿ. ಆದರೆ ಅಪ್ಪಟ ಹಿಂದೂ ಧಾರ್ಮಿಕತೆಯನ್ನು ಮೈಗೂಡಿಸಿಕೊಂಡಿರುವ ದೇವಾಲಯದಲ್ಲಿ ಕ್ರಿಸ್ತವರ್ಷಾಚರಣೆ ಉಂಟೇ?

ಹೌದು, ಮೈಸೂರಿನ ಹಿಂದೂ ದೇವಾಲಯವೊಂದರಲ್ಲಿ ಸಾಮರಸ್ಯದ ಸಂಕೇತವಾಗಿ ಹೊಸವರ್ಷವನ್ನು ತಮ್ಮದೇ ರೀತಿಯಲ್ಲಿ ಕಳೆದ ಒಂದು ದಶಕದಿಂದ ಆಚರಿಸುತ್ತಾ ಬರಲಾಗುತ್ತಿದೆ. ಅಂದು ಬರುವ ಎಲ್ಲಾ ಭಕ್ತರೂ ಲಡ್ಡುಗಳನ್ನು ಪ್ರಸಾದದ ರೂಪದಲ್ಲಿ ಕೊಡುತ್ತಾ ಹೊಸವರ್ಷದ ಶುಭಾಶಯ ಹೇಳುವ ಸಂಪ್ರದಾಯವಿದೆ. ಮೈಸೂರಿನ ವಿಜಯನಗರ ಬಡಾವಣೆಯಲ್ಲಿರುವ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಈ ವರ್ಷವೂ ಅಸಂಖ್ಯ ಭಕ್ತರಿಗೆ ಲಡ್ಡುಗಳನ್ನು ಹಂಚಿ ಹೊಸವರ್ಷವನ್ನು ಸ್ವಾಗತಿಸಲು ಈಗಾಗಲೇ ಭರದ ಸಿದ್ಧತೆ ನಡೆದಿವೆ.

ಒಂದೆರಡು ಸಾವಿರವಲ್ಲ… ಎರಡು ಲಕ್ಷ!

ಸಾಂಕೇತಿಕವಾಗಿ ಆರಂಭವಾದ ಈ ಸಂಪ್ರದಾಯ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳುತ್ತಾ ಹೋದಂತೆಲ್ಲಾ ದೇವಾಲಯದ ಆಡಳಿತ ಮಂಡಳಿಯವರು ಲಡ್ಡುಗಳ ಸಂಖ್ಯೆಯನ್ನೂ ಅದೇ ರೀತಿ ಹೆಚ್ಚಿಸುತ್ತಾ ಬಂದಿರುವುದು ಇನ್ನೊಂದು ಸೋಜಿಗ. ಬಹುಶಃ ಇಲ್ಲಿ ನಡೆಯುವ ಪ್ರಸಾದ ದಾಸೋಹವನ್ನು ಯಾರೂ ಊಹಿಸಲಾರರು. ತಿರುಪತಿಯ ತಿರುಮಲ ದೇವಾಲಯದಲ್ಲಿ ದೊರೆಯುವಷ್ಟೇ ರುಚಿಕರವಾದ ಲಡ್ಡುಗಳನ್ನು ಜನವರಿ ಒಂದರಂದು ಹಂಚುತ್ತಾರೆ! ಮೈಸೂರಿನ ಸಂಸ್ಕೃತ ಪಾಠಶಾಲೆಯ ಪ್ರಾಂಶುಪಾಲ, ಆಧ್ಯಾತ್ಮಿಕ ಚಿಂತಕ ಪ್ರೊ| ಭಾಷ್ಯಂ ಸ್ವಾಮೀಜಿ ಅವರು ಶ್ರೀಯೋಗಾನರಸಿಂಹಸ್ವಾಮಿ ದೇವಾಲಯದ ಸಂಸ್ಥಾಪಕರು. ೧೯೯೪ರಲ್ಲಿ ಕೇವಲ ಒಂದು ಸಾವಿರ ಲಡ್ಡುಗಳ ವಿತರಣೆಯೊಂದಿಗೆ ಆರಂಭವಾದ ಈ ಸತ್ಕಾರ್ಯ ಇಂದು ಎರಡು ಲಕ್ಷ ಲಡ್ಡುಗಳ ವಿತರಣೆಯ ಬೃಹತ್ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಲಡ್ಡುಗಳೆಂದರೆ ಸಣ್ಣ ಗಾತ್ರವೂ ಅಲ್ಲ. ಕನಿಷ್ಠ ೧೦೦ ಗ್ರಾಂ ತೂಕವಿರುವ ಎರಡು ಲಕ್ಷ ಲಡ್ಡುಗಳನ್ನು ಭಕ್ತರಿಗೆ ಒಂದೇ ದಿನ ಹಂಚುವುದೆಂದರೆ ಸಾಮಾನ್ಯದ ಮಾತೇ? ಅದೂ ಉಚಿತವಾಗಿ! ಸಣ್ಣ ದೇವಾಲಯಕ್ಕೆ ಇದು ಅತ್ಯಂತ ಕಷ್ಟದ ಕೆಲಸ. ಆದರೂ ಪ್ರೊ| ಭಾಷ್ಯಂ ಸ್ವಾಮೀಜಿಯವರ ಸಂಕಲ್ಪಶಕ್ತಿಯಿಂದ ಇಂಥದೊಂದು ಬೃಹತ್ಕಾರ್ಯವನ್ನು ದೇವಾಲಯದಲ್ಲಿ ಧಾರ್ಮಿಕತೆಗೆ ಲವಶೇಷವೂ ಚ್ಯುತಿ ಬಾರದಂತೆ ಮುಂದುವರಿಸುತ್ತಾ ಬಂದಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸುತ್ತದೆ.

ಹೊಟ್ಟೆ ತುಂಬಾ ಪುಳಿಯೊಗರೆ!

ವಿಜಯನಗರದ ಶ್ರೀಯೋಗಾನರಸಿಂಹಸ್ವಾಮಿ ದೇವಾಲಯವು ತನ್ನ ವಿನೂತನ ಕಾರ್ಯಗಳಿಂದಲೇ ಭಕ್ತರನ್ನು ಹೆಚ್ಚುಹೆಚ್ಚು ಆಕರ್ಷಿಸುತ್ತಿದೆ. ದೇವರದರ್ಶನಕ್ಕೆ ಹೋಗುವ ಭಕ್ತರಾರೂ ಇಲ್ಲಿಂದ ಬರಿಗೈಯಲ್ಲಿ ಹಿಂತಿರುಗುವುದಿಲ್ಲ, ಕೈಯಲ್ಲಿ ಪ್ರಸಾದವನ್ನು ತೆಗೆದುಕೊಂಡೇ ಹೋಗುತ್ತಾರೆ. ಇಲ್ಲಿನ ಪ್ರಸಾದ ವಿನಿಯೋಗದ ವೈಶಿಷ್ಟ್ಯವೇ ಅಂಥದ್ದು. ಹೊಸವರ್ಷಕ್ಕೆ ಲಡ್ಡುಗಳಷ್ಟೇ ಅಲ್ಲ, ಹತ್ತು ಕ್ವಿಂಟಾಲ್‌ನಷ್ಟು ಪುಳಿಯೊಗರೆಯನ್ನೂ ಕೊಡುತ್ತಾರೆ. ಇದೇ ಕಾರಣಕ್ಕೆ ಜನವರಿ ಒಂದರಂದು ಮುಂಜಾನೆ ಆರರಿಂದ ರಾತ್ರಿ ೧೧ರತನಕ ಪ್ರಸಾದ ವಿತರಣೆ ಕಾರ್ಯ ಒಂದು ಕ್ಷಣವೂ ನಿಲ್ಲುವುದಿಲ್ಲ. ಸಾವಿರಾರು ಮಂದಿ ಭಕ್ತರು ಅಂದು ದೇವಾಲಯಕ್ಕೆ ಬಂದು ದರ್ಶನ ಪಡೆಯುತ್ತಾರೆ. ಅವರೆಲ್ಲರಿಗೂ ಸಂತೃಪ್ತಿಯಾಗುವಷ್ಟು ಪ್ರಸಾದವನ್ನು ನೀಡಿ ಕಳುಹಿಸುವುದಷ್ಟೇ ಇಲ್ಲಿನವರಿಗೆ ಸಂತೃಪ್ತಿ. ಭಕ್ತರು ಎಷ್ಟೇ ಸಂಖ್ಯೆಯಲ್ಲಿ ಹರಿದು ಬರಲಿ, ಬೇಸರವಿಲ್ಲ. ಎಲ್ಲರಿಗೂ ಪ್ರಸಾದ ಸಿಕ್ಕೇ ಸಿಗುತ್ತದೆ.

ಇಲ್ಲಿ ಜಾತಿ, ಮತ, ಪಂಥದ ಸೋಂಕೇ ಇಲ್ಲ. ಹೊಸವರ್ಷದ ದಿನ ಭಕ್ತರಿಗೆ ಲಡ್ಡು ಹಂಚಲು ಪ್ರೇರಣೆ ಏನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಸಮಾಜದಲ್ಲಿರುವ ಜಾತಿ, ಮತ, ವರ್ಗಭೇದವನ್ನು ಅಳಿಸಿ ಹಾಕುವ ನಿಟ್ಟಿನಲ್ಲಿ ನಮ್ಮದೊಂದು ಸಣ್ಣ ಪ್ರಯತ್ನ ಇದು ಎನ್ನುತ್ತಾರೆ ದೇವಾಲಯದ ಆಡಳಿತಾಧಿಕಾರಿ ಡಾ.ಎನ್. ಶ್ರೀನಿವಾಸನ್. ಲಡ್ಡುಗಳನ್ನು ಭಕ್ತರಿಗೆ ಹಂಚುವ ದೊಡ್ಡ ಸವಾಲಿನ ಕೆಲಸದ ಹಿಂದಿರುವ ಶಕ್ತಿಯೂ ಇವರೇ. ದೇವಾಲಯದಲ್ಲಿ ಭಕ್ತರಿಗೆ ಒಂದಿಷ್ಟೂ ಕೊರತೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆಗಳನ್ನು ರೂಪಿಸುವುದರಲ್ಲಿ ಇವರು ನಿಸ್ಸೀಮರು. ಬರುವ ಎಲ್ಲಾ ಭಕ್ತರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ ಮೇಲು-ಕೇಳು, ಬಡವ-ಶ್ರೀಮಂತ ಎಂಬ ಭೇದ ಮಾಡದೆ ಎಲ್ಲರಿಗೂ ಸಮಾನವಾಗಿ ಪ್ರಸಾದ ಕೊಟ್ಟು ಸಮಾನತೆಯ ಸಂದೇಶ ಸಾರುವ ಪ್ರಯತ್ನ ಸಾರ್ಥಕತೆವೆನಿಸದೇ ಇರದು.

ವೈಜ್ಞಾನಿಕ ಕಾರಣವೂ ಇದೆ

ಹೊಸವರ್ಷದ ದಿನ ಲಡ್ಡುಗಳನ್ನೇ ಹಂಚುವುದೇಕೆ? ಇದರ ಹಿಂದೆ ಸರಿಯಾದ ವೈಜ್ಞಾನಿಕ ಕಾರಣವಿದೆ. ಜನವರಿ ತಿಂಗಳ ಧನುರ್ಮಾಸದ ಚಳಿ ಮೈಕೊರೆಯುವಂತಿರುತ್ತದೆ. ಇಂಥ ಚಳಿಗಾಲದಲ್ಲಿ ದೇಹವನ್ನು ಉಷ್ಣಾಂಶದಲ್ಲಿಡುವ ಆಹಾರ ಪದ್ಧತಿಯನ್ನು ಹಿಂದೂ ಸಂಸ್ಕೃತಿ ರೂಢಿಸಿದೆ. ಚಳಿಗಾಲದಲ್ಲಿ ಹೆಸರುಬೇಳೆನಿಂದ ತಯಾರಿಸಿದ ಪೊಂಗಲ್, ಕಡಲೆಬೇಳೆಯಿಂದ ತಯಾರಿಸಿದ ಲಡ್ಡುಗಳನ್ನು ಸೇವಿಸಿದರೆ ದೇಹದ ಉಷ್ಣಾಂಶ ಸಮತೋಲನದಲ್ಲಿರುತ್ತದೆ. ದೇಹ ಚಳಿಯನ್ನು ಸಮರ್ಥವಾಗಿ ಎದುರಿಸುತ್ತದೆ ಎಂಬ ವೈಜ್ಞಾನಿಕ ನಂಬಿಕೆ ಕೂಡ ಇವರ ಈ ಪ್ರಸಾದ ಹಂಚಿಕೆಯ ಹಿಂದೆ ಇದೆ ಎನ್ನುತ್ತಾರೆ- ದೇವಾಲಯದ ಆಡಳಿತ ಸಮಿತಿ ಸದಸ್ಯ ಕೆ.ಆರ್. ಯೋಗಾನರಸಿಂಹಸ್ವಾಮಿ

ತಿರುಪತಿಯ ಬಾಣಸಿಗರು

ಯೋಗಾನರಸಿಂಹಸ್ವಾಮಿ ದೇವಾಲಯದಲ್ಲಿ ಕೊಡುವ ಲಡ್ಡುಗಳು ತಿರುಪತಿಯ ಲಡ್ಡುಗಳಷ್ಟೇ ರುಚಿಯಾಗಿರಬೇಕೆಂಬ ಹಂಬಲ ಇಲ್ಲಿನ ಆಡಳಿತ ಮಂಡಳಿಗಿದೆ. ಇದೇ ಕಾರಣಕ್ಕೆ ಲಡ್ಡುಗಳನ್ನು ತಯಾರಿಸಲು ತಿರುಪತಿಯಿಂದಲೇ ೫೦ ಮಂದಿ ಬಾಣಸಿಗರು ಪ್ರತಿವರ್ಷ ದೇವಾಲಯಕ್ಕೆ ಬಂದಿಳಿಯುತ್ತಾರೆ. ಎರಡು ಲಕ್ಷ ಲಡ್ಡುಗಳನ್ನು ತಯಾರಿಸಲು ಕ್ವಿಂಟಾಲ್‌ಗಟ್ಟಲೆ ದಿನಸಿಬೇಕು. ೩೫ ಕ್ವಿಂಟಾಲ್ ಕಡಲೇಹಿಟ್ಟು, ೭೦ ಕ್ವಿಂಟಾಲ್ ಸಕ್ಕರೆ, ೨೦೦ ಟನ್‌ಗಳಷ್ಟು ಖಾದ್ಯ ತೈಲ, ೩೦ ಟನ್ ಗೋಡಂಬಿ, ಬೂರಾ ಸಕ್ಕರೆ, ೧೫ ಕೆ.ಜಿ. ಪಿಸ್ತಾ, ೧೫ ಕೆ.ಜಿ. ಏಲಕ್ಕಿ, ೨೫ ಕೆ.ಜಿ. ಜಾಯಿಕಾಯಿ ಮತ್ತು ಜಾಪತ್ರೆ, ೪ ಕೆ.ಜಿ. ಪಚ್ಚ ಕರ್ಪೂರ, ೪೦ ಕೆ.ಜಿ. ಲವಂಗವನ್ನು ಬಳಸಲಾಗುತ್ತದೆ.

ವಿವರಗಳಿಗೆ : ೯೩೪೨೧೮೮೩೨೩/೯೯೦೦೪೦೦೦೦೦

Leave a Comment