ಯೋಗದಿಂದ ಸುಯೋಗ………………… ವಿಶ್ವ ಯೋಗ ದಿನಾಚರಣೆ

ಯೋಗ ಭಾರತದ ಸಂಸ್ಕೃತಿಯಷ್ಟೇ ಅಲ್ಲ. ಸನಾತನ ಕಾಲದಿಂದ ನಮ್ಮ ಹಿರಿಯರು ಮುಂದಿನ ಪೀಳಿಗೆಗೆ ಅವಶ್ಯಕವಿರಲಿ ಎಂಬ ಸದುದ್ದೇಶದಿಂದ ಬಿಟ್ಟು ಹೋಗಿರುವ ಸಂಪತ್ತು. ಸಾವಿರಾರು ವರ್ಷಗಳ ಹಿಂದೆಯೇ ಈ ಯೋಗದ ಮಹತ್ವವನ್ನು ಅರಿತ ನಮ್ಮ ಋಷಿಮುನಿಗಳು ಯಾವುದೇ ಕಾಯಿಲೆ-ರೋಗ-ರುಜಿನಗಳಿಲ್ಲದೇ ಶತಾಯುಷಿಯಾಗಿ ಬಾಳಿ ಬದುಕಿ ತೋರಿಸಿದ್ದಾರೆ. ಯೋಗಾಸನಗಳ ಪಿತಾಮಹ ಪತಂಜಲಿ ಮಹರ್ಷಿಗಳು ಮನುಕುಲಕ್ಕೆ ನೀಡಿರುವ ಅಭೂತಪೂರ್ವ ಕೊಡುಗೆಯಾಗಿದ್ದು, ಸಾವಿರಾರು ವರ್ಷಗಳ ಹಿಂದೆಯೇ ಚಿಂತಿಸಿ ಮುಂದಿನ ಪೀಳಿಗೆಗೆ ಒದಗಿಬರಬಹುದಾದ ಕಾಯಿಲೆಗಳಿಗೆ ಯೋಗದ ಮೂಲಕ ಉತ್ತರ ಕೊಟ್ಟಿದ್ದಾರೆ.

ಇಂದಿನ ದಿನಗಳಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ಹೋದರೂ ಸಹ ತಪ್ಪದ ಒತ್ತಡಮಯ ಜೀವನದಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಮೂರು ಹೊತ್ತು ಸರಿಯಾಗಿ ತಿನ್ನಲೂ ಕೂಡ ಆಗದಂತಹ ಪರಿಸ್ಥಿತಿಯಲ್ಲಿ ಇದ್ದು, ದುಡಿಮೆಯೇ ಜೀವನ ಎಂಬಂತಾಗಿದೆ. ಇದರಿಂದ ತಮಗರಿವಿಲ್ಲದೆ ಮಾನಸಿಕ ಕಾಯಿಲೆಗಳು ಸೇರಿದಂತೆ ದೈಹಿಕ ಕಾಯಿಲೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದು, ಶತಾಯುಷಿಗಳಾಗಿ ಬಾಳಬೇಕಿದ್ದ ಜನರು ೬೦ ರಿಂದ ೬೫ ವರ್ಷಕ್ಕೆ ಹೃದಯಾಘಾತಗಳಂತಹ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ವಿಷಾದಕರ ಸಂಗತಿ. ಜೊತೆಗೆ ಯೋಗದ ಮಹತ್ವ ಅರಿಯದೆ ಇಂಗ್ಲಿಷ್ ಮೆಡಿಸಿನ್ಸ್‌ನಂತಹ ಶಕ್ತಿಹೀನ ಮಾಡುವಂತಹ ಚಿಕಿತ್ಸೆಗಳಿಗೆ ಮೊರೆಹೋಗುತ್ತಿರುವುದು ಇಂದಿನ ಪರಿಸ್ಥಿತಿ. ಅಲ್ಲದೆ ಹುಟ್ಟುತ್ತಿರುವ ಮಕ್ಕಳು ಅಪೌಷ್ಠಿಕ ಸಮಸ್ಯೆಯಿಂದ, ಯುವಕರು ದೌರ್ಬಲ್ಯತೆಯಿಂದ ಬಳಲುತ್ತಿದ್ದು, ದುರ್ಬಲ ಯುವ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತಿದ್ದಾರೆ.

ವಿಶ್ವದ ಆರೋಗ್ಯ ದೃಷ್ಟಿಯಿಂದ ಯೋಗವನ್ನು ಮತ್ತು ಇದರ ಮಹತ್ವವನ್ನು ವಿಶ್ವದಾದ್ಯಂತ ಸಾರಲು ಹೊರಟಿರುವುದು ಒಂದು ಉತ್ತಮ ಯೋಜನೆಯಾಗಿದ್ದು, ಪ್ರತಿಯೊಂದು ಧರ್ಮದ ಜನರು ಯೋಗದ ಮಹತ್ವವನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಯುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಪ್ರಾಣಾಯಾಮ ಯೋಗದ ಒಂದು ಭಾಗ. ಇದು ಉಸಿರಾಟ ಮತ್ತು ವಿಶ್ರಾಂತಿಯನ್ನೊಳಗೊಂಡ ಪ್ರಕ್ರಿಯೆ ಇದರಿಂದ ಹೆಚ್ಚಿನ ಲಾಭವಿದೆ. ಪ್ರಾಣಾಯಾಮ ಎನ್ನುವುದು ‘ಪ್ರಾಣ’ ಮತ್ತು ‘ಆಯಾಮ’ದ ಸಂಗಮ. ಪ್ರಾಣವೆಂದರೆ ಶಕ್ತಿ ಮತ್ತು ಆಯಾಮವೆಂದರೆ ನಿಯಂತ್ರಣವೆಂದರ್ಥ. ಪ್ರಾಣಾಯಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕವು ಶ್ವಾಸಕೋಶಕ್ಕೆ ಒದಗುತ್ತದೆ. ಹಾಗೆಯೇ ಅಷ್ಟೇ ಪ್ರಮಾಣದಲ್ಲಿ ಇಂಗಾಲದ ಡೈ ಆಕ್ಸೈಡ್ ಮತ್ತು ಉಸಿರಾಟದಿಂದ ೫೦೦ ಕ್ಯೂಬಿಕ್ ಸೆಂ. ಮೀ. ಗಾಳಿಯನ್ನು ತೆಗೆದುಕೊಳ್ಳುತ್ತಾನೆ. ಆದರೆ ಪ್ರಾಣಾಯಾಮದಲ್ಲಿ ಸುಮಾರು ೩೦೦೦-೪೦೦೦ ಕ್ಯೂಬಿಕ್ ಸೆಂ.ಮೀ. ಗಾಳಿ ತೆಗೆದುಕೊಳ್ಳುತ್ತಾನೆ. ಸರಿಯಾಗಿ ಪ್ರಾಣಾಯಾಮ ಅಭ್ಯಾಸ ಮಾಡಿಕೊಂಡರೆ ಆಯಸ್ಸು ಹೆಚ್ಚಿಸಿಕೊಳ್ಳಬಹುದು. ಉಸಿರಾಟವನ್ನು ನಮ್ಮ ಇಚ್ಛೆಗೊಳಪಡಿಸಿ ಹತೋಟಿಗೆ ತರುವುದೇ ಪ್ರಾಣಾಯಾಮ. ಯೋಗದಲ್ಲಿ ೮ ಅಂಗಗಳನ್ನು ನಿದೇರ್ಶಿಸಿ, ಅದಕ್ಕೊಂದು ವೈಜ್ಞಾನಿಕ ಚೌಕಟ್ಟು ಹಾಕಿದ ಋಷಿಗಳು ಹೇಳುವಂತೆ ಮನಸ್ಸಿನ ಚಂಚಲತೆ, ಗೊಂದಲಗಳನ್ನು ನಿವಾರಿಸುವ ಕ್ರಮಬದ್ಧ ಉಪಾಯವೇ ‘ಪ್ರಾಣಾಯಾಮ’. ಪ್ರಾಣ ವಾಯುವು ಶ್ವಾಸಕೋಶಕ್ಕೆ ಸೇರಿ ಹೃದಯ ಭಾಗದಲ್ಲಿ ಚಲಿಸಿ ಆಮ್ಲಜನಕ ಪೂರೈಕೆ ಮಾಡಿ ಉಸಿರಾಟವನ್ನು ನಿಯಂತ್ರಿಸುತ್ತದೆ. ಆಹಾರ ಸ್ವೀಕಾರ ರಕ್ತ ಮತ್ತು ನಾಡಿ ಶುದ್ಧೀಕರಣ ಮಾಡುತ್ತದೆ.

*ಪ್ರತಿ ದಿನ ಒಂದು ಗಂಟೆ ಯೋಗಾಭ್ಯಾಸ ಮಾಡುವುದರಿಂದ ನೀವು ಈಗಿರುವ ವಯಸ್ಸಿಗಿಂತ ೫ ವರ್ಷ ಕಡಿಮೆ ವಯಸ್ಸಿನವರಂತೆ ಕಾಣುತ್ತೀರಿ. ನಿಮ್ಮ ಚರ್ಮದ ಅಂದವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಯೋಗ ಸಹಕರಿಸುವುದಲ್ಲದೇ, ವಯಸ್ಸಾದಾಗ ಬೇಗನೇ ಚರ್ಮ ಸುಕ್ಕುಗಟ್ಟುವುದನ್ನು ನಿಯಂತ್ರಿಸಬಹುದು.
*ಸಕಾರಾತ್ಮಕ ಯೋಚನೆಗಳನ್ನು ನಿಮ್ಮೊಳಗೆ ತುಂಬಲು ಯೋಗ ಅತ್ಯಂತ ಪರಿಣಾಮಕಾರಿಯಾದ ಮಾರ್ಗವಾಗಿದೆ.
*ವ್ಯಾಯಾಮದಿಂದ ದೇಹದ ಆರೋಗ್ಯವನ್ನಷ್ಟೇ ಕಾಯ್ದುಕೊಳ್ಳಬಹುದು. ಆದರೆ ಯೋಗದಿಂದ ದೇಹ ಮತ್ತು ಮನಸ್ಸುಗಳೆರಡೂ ಆರೋಗ್ಯವಾಗಿರುತ್ತವೆ.
*ನಿಮ್ಮ ಜೀವನಶೈಲಿಯನ್ನು ಆಕರ್ಷಕವಾಗಿಟ್ಟುಕೊಂಡರೆ ದಿನಕ್ಕೊಂದು ಗಂಟೆ ಯೋಗ ಮಾಡಿ.
*ನಿರಂತರ ಯೋಗಾಭ್ಯಾಸವು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೂ ಚೈತನ್ಯದಿಂದಿರಲು ಸಹಕರಿಸುತ್ತದೆ.

ಟ್ರೆಂಡ್ ಆಗಿ ಬದಲಾದ ಯೋಗ:
ಯೋಗದ ಮಹತ್ವವನ್ನು ವಿಶ್ವವೇ ಅರಿತು ಗುರುತಿಸಿದೆ. ಸರ್ವ ರೋಗಕ್ಕೂ ಯೋಗದಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂಬ ಸತ್ಯವೂ ಸಾಬೀತಾಗಿದೆ. ಇತ್ತಿಚೆಗೆ ಯೋಗಕ್ಕೆ ಹೆಚ್ಚು ಮಹತ್ವ ಬಂದಿದೆ. ಯೋಗ ಮಾರ್ಗದ ಮೂಲಕ ಆರೋಗ್ಯವನ್ನು ಹುಡುಕುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಿಜ ಹೇಳಬೇಕೆಂದರೆ ಯೋಗ ಮಾಡುವುದು ಇಂದು ಯುವಜನತೆಯಲ್ಲಿ ಒಂದು ಟ್ರೆಂಡ್ ಆಗಿ ಬದಲಾಗುತ್ತಿರುವುದನ್ನು ಸ್ವಾಗತಿಸಬೇಕು. ಯೋಗ ಮನಸ್ಸನ್ನು ಎರಡನ್ನೂ ಬದಲಾಯಿಸುವ ಶಕ್ತಿ ಹೊಂದಿದೆ. ಯೋಗದಿಂದ ಸಕಾರಾತ್ಮಕ ಯೋಚನೆಗಳು ಮೂಡುತ್ತವೆ.
ನೀವು ಯೋಗಕ್ಕೆ ಶರಣಾದರೆ…
ಧ್ಯಾನದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಲು ನೆರವಾಗಲೆಂದು ಋಷಿ-ಮುನಿಗಳು ಬಳಸುತ್ತಿದ್ದ ಯೋಗಾಭ್ಯಾಸವು ಇಂದು ‘ಸರ್ವರೋಗ ನಿವಾರಕ ವಿಜ್ಞಾನ’ವಾಗಿ ಬೆಳೆದು ನಿಂತಿದೆ. ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯಬೇನೆ, ರಕ್ತನಾಳಗಳಲ್ಲಿ ತೊಡಕು, ಬೊಜ್ಜು, ಅಸ್ತಮಾ, ಶಾಸನಾಳಗಳ ಕಾಯಿಲೆ, ಬಿಳಿತೊನ್ನು, ಖಿನ್ನತೆ, ಪಾರ್ಕಿನ್ಸನ್ ಕಾಯಿಲೆ, ನಿದ್ರಾಹೀನತೆ, ತಲೆಶೂಲೆ, ಥೈರಾಯ್ಡ್, ಸಂಧಿವಾತ, ಕತ್ತು ನೋವು, ಹೆಪಟೈಟಿಸ್, ಮೂತ್ರ ಪಿಂಡಗಳ ವೈಫಲ್ಯ, ಕ್ಯಾನ್ಸರ್, ಯಕೃತ್ತಿನ ವೈಫಲ್ಯ, ಅಜೀರ್ಣತೆ, ಮಲಬದ್ಧತೆ, ಆಮ್ಲೀಯತೆ ಇವೇ ಮುಂತಾದ ಮಾರಕ ರೋಗಗಳಿಂದ ಬಳಲುತ್ತಿರುವ ಸಹಸ್ರಾರು ಜನರಿಗೆ ಚಿಕಿತ್ಸೆ ನೀಡುವಲ್ಲಿ ಯೋಗ ಪರಿಣಾಮಕಾರಿಯಾಗಿದೆ.
ಡಾ. ಗುರುರಾಜ ಪೋಶೆಟ್ಟಿಹಳಿ

Leave a Comment