ಯೋಗದಿಂದ ಉತ್ತಮ ಆರೋಗ್ಯ

ತಿ.ನರಸೀಪುರ, ಡಿ.5- ಯೋಗದಿಂದ ಮಾನಸಿಕ ದೈಹಿಕ ಬೆಳವಣಿಗೆ ಜತೆಗೆ ರೋಗ ಮುಕ್ತ ಜೀವನ ನಡೆಸಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಹೇಳಿದರು.
ತಾಲ್ಲೂಕಿನ ಬನ್ನಹಳ್ಳಿಹುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಾಮೂಹಿಕ ದೈಹಿಕ ಶಿಕ್ಷಣ ಅಭ್ಯಾಸದಲ್ಲಿ ಭಾಗವಹಿಸಿದ ಅವರು ಸ್ವತಹ ಯೋಗ ಪಟುವಾಗಿದ್ದು, ವಿದ್ಯಾರ್ಥಿಗಳಿಗೆ ಯೋಗದ ಮಹತ್ವ ತಿಳಿಸಿದರು.
ಅಧ್ಯಯನದಲ್ಲಿ ಆಸಕ್ತಿ, ಜ್ಞಾನ ಉತ್ತಮ ಚಿಂತನೆ, ಕ್ರಿಯಾಶೀಲತೆ ಕೂಡ ಯೋಗ ಮತ್ತು ಧ್ಯಾನ ಮಾಡುವುದರಿಂದ ಬರುತ್ತದೆ. ಚಿಕ್ಕ ವಯಸ್ಸಿನಿಂದಲೇ ಯೋಗ ಮಾಡುವುದರಿಂದ ರೋಗ ನಿಯಂತ್ರಣ ಮಾಡಿ ಉತ್ತಮ ಆರೋಗ್ಯ ಕಂಡುಕೊಳ್ಳಬಹುದು. ಜ್ಞಾನ ವೃದ್ಧಿಯಾದಲ್ಲಿ ಸಾಧನೆಗೆ ಹೆಚ್ಚು ಪ್ರೇರಣೆಯಾಗುತ್ತದೆ ಏಕಾಗ್ರತೆಯ ಅಧ್ಯಯನಕ್ಕೆ ಯೋಗ ಮತ್ತು ಧಾನ್ಯ ಬಹಳ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಯೋಗಾಭ್ಯಾಸ ಮಾಡುವಂತೆ ಸಲಹೆ ನೀಡಿದರು.
ಸೂರ್ಯನಮಸ್ಕಾರ ಸೇರಿದಂತೆ ವಿವಿಧ ರೀತಿಯ ಆಸನಗಳನ್ನು ಮಾಡಿ ತೋರಿಸುವ ಮೂಲಕ ವಿದ್ಯಾರ್ಥಿಗಳಿಂದ ಮಾಡಿಸಿದ್ದು ವಿಶೇಷವಾಗಿತ್ತು.
ಇದೇ ವೇಳೆ ಜಿಲ್ಲಾ ಮಟ್ಟದ ವಿಜ್ಞಾನ ಗೋಷ್ಟಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದ ಜೀವನ್ ಕುಮಾರ್ ಹಾಗೂ ಸಚಿನ್ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸ್ವಾಮಿ ಅವರು ಪ್ರಮಾಣಪತ್ರಗಳನ್ನು ವಿತರಿಸಿದರು.
ಮುಖ್ಯ ಶಿಕ್ಷಕ ಮಂಟೆಸ್ವಾಮಿ, ದೈಹಿಕ ಶಿಕ್ಷಣ ಶಿಕ್ಷಕ ಮಹಾಂತಪ್ಪ ನಾಗೂರು, ಸಿಆರ್‍ಪಿ ರುದ್ರಸ್ವಾಮಿ, ಶಿಕ್ಷಕರಾದ ಪ್ರಕಾಶ್ ಕೊತ್ತಂಬರಿ, ಸೇಸುರಾಜು, ತೇಜಸ್ವಿನಿದೇವಿ, ಸುಮಾ, ವಸಂತಕುಮಾರಿ ಸೇರಿದಂತೆ ಇತರರು ಭಾಗವಹಿಸಿದ್ದರು.

Leave a Comment