ಯೆಸ್ ಬ್ಯಾಂಕ್ ಅಕ್ಟೋಬರ್ ತ್ರೈ ಮಾಸಿಕ ನಷ್ಟ 18,564 ಕೋಟಿ

ನವದೆಹಲಿ, ಮಾ ೧೫- ನಷ್ಟದಲ್ಲಿ ಮುಳುಗಿರುವ ಯೆಸ್ ಬ್ಯಾಂಕ್‌ ತನ್ನ ಅಕ್ಟೋಬರ್- ಡಿಸೆಂಬರ್ ತ್ರೈ ಮಾಸಿಕದಲ್ಲಿ 18,564 ಕೋಟಿ ರುಪಾಯಿ ನಷ್ಟ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1000 ಕೋಟಿ ರುಪಾಯಿ ಲಾಭ ದಾಖಲಿಸಿತ್ತು. ಬ್ಯಾಂಕ್. ಜುಲೈ- ಸೆಪ್ಟೆಂಬರ್ ತ್ರೈ ಮಾಸಿಕಕ್ಕೆ ಬ್ಯಾಂಕ್ 629 ಕೋಟಿ ರುಪಾಯಿ ನಷ್ಟ ಅನುಭವಿಸಿತ್ತು.
ಯೆಸ್ ಬ್ಯಾಂಕ್‌ನ ಪಾವತಿಯಾಗದ ಸಾಲಗಳು (ಎನ್‌ಪಿಎ) 40,709 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಇಂಥ 5158 ಕೋಟಿ ರುಪಾಯಿ ಸಾಲವನ್ನು ರೈಟ್ ಆಫ್ ಮಾಡಲಾಗಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 2.10% ಇದ್ದ ಎನ್‌ಪಿಎ ಪ್ರಮಾಣ 18.87%ಗೆ ಏರಿಕೆ ಆಗಿದೆ. ನಿವ್ವಳ ಎನ್ ಪಿಎ ಪ್ರಮಾಣ 5.97% ಇತ್ತು.
ಪಾವತಿಯಾಗದ ಸಾಲ ಏರಿಕೆ ಆಗುತ್ತಿದ್ದಂತೆ ಅದಕ್ಕಾಗಿ ಮೀಸಲಿಟ್ಟ ಹಣ 24,765 ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಈ ಅವಧಿಗೆ 548 ಕೋಟಿ ಮೀಸಲಿತ್ತು.
ಯೆಸ್ ಬ್ಯಾಂಕ್ ಠೇವಣಿಯಲ್ಲೂ ಇಳಿಮುಖವಾಗಿದೆ. ಅಕ್ಟೋಬರ್- ಡಿಸೆಂಬರ್ ಮಧ್ಯೆ 40 ಸಾವಿರ ಕೋಟಿ ರುಪಾಯಿ ಮೌಲ್ಯದ ಠೇವಣಿ ಕಳೆದುಕೊಂಡಿದೆ. ಇನ್ನು ಜನವರಿ ಮತ್ತು ಮಾರ್ಚ್ ಮಧ್ಯೆ 30 ಸಾವಿರ ಕೋಟಿ ಠೇವಣಿ ಕಳೆದುಕೊಂಡಿದೆ.
ವಿತ್‌ಡ್ರಾ ಮಿತಿ ಬುಧವಾರಕ್ಕೆ ಕೊನೆ
ಯೆಸ್ ಬ್ಯಾಂಕ್ ಪುನಶ್ಚೇತನ ಯೋಜನೆಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಶನಿವಾರ ಬಿಡುಗಡೆ ಮಾಡಿದೆ. ಅದರಂತೆ ನಗದು ವಿತ್ ಡ್ರಾ ಗೆ ಇದ್ದ ನಿರ್ಬಂಧಗಳನ್ನು ಸರ್ಕಾರವು ಮಾ. 18 ರಿಂದ ತೆರವುಗೊಳಿಸಲಿವೆ. ಕೆಲವು ದಿನಗಳ ಹಿಂದೆ ಯೆಸ್ ಬ್ಯಾಂಕ್ ನಿಂದ ಹಣ ಹಿಂತೆಗೆದುಕೊಳ್ಳಲು ಆರ್.ಬಿ.ಐ. 50,000 ರೂಪಾಯಿಗಳು ನಿರ್ಬಂಧ ಏರಿತ್ತು. ಈಗ ಈ ನಿರ್ಬಂಧವು ಮಾ 18 ರಿಂದ ತೆರವಾಗಲಿದೆ.

Leave a Comment