ಯುವ ವಿಶ್ವಕಪ್ ಕ್ರಿಕೆಟ್ : ಫೈನಲ್‌ಗೆ ಭಾರತ

ಪಾಕ್‌ಗೆ ಹೀನಾಯ ಸೋಲು

ಕ್ರೈಸ್ಟ್‌ಚರ್ಚ್, ಜ. ೩೦-ನ್ಯೂಜಿಲ್ಯಾಂಡ್‌ನಲ್ಲಿ ನಡೆಯುತ್ತಿರುವ ೧೯ ವರ್ಷದೊಳಗಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಇಂದು ಕ್ರೈಸ್ಟ್ ಚರ್ಚ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ೨೦೩ ರನ್‌ಗಳಿಂದ ಸೋಲಿಸಿ ಭರ್ಜರಿ ಜಯ ದಾಖಲಿಸಿದೆ. ಫೆ. ೩ ರಂದು ಫೈನಲ್ ಪಂದ್ಯ ನಡೆಯಲಿದ್ದು, ಪ್ರಶಸ್ತಿಗಾಗಿ ಆಸ್ಟ್ರೇಲಿಯಾ ಮತ್ತು ಭಾರತ ಸೆಣಸಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ೫೦ ಓವರ್‌ಗಳಲ್ಲಿ ೯ ವಿಕೆಟ್ ಕಳೆದುಕೊಂಡು ೨೭೨ ರನ್ ಸವಾಲಿನ ಮೊತ್ತ ದಾಖಲಿಸಿತು. ಶುಭ್ ಮನ್ ಗಿಲ್ ಅಜೇಯ ೧೦೨ ರನ್ ಗಳಿಸಿ ತಂಡಕ್ಕೆ ಬ್ಯಾಟಿಂಗ್ ಆಸರೆಯಾದರು.

೯೪ ಎಸೆತಗಳಲ್ಲಿ ೧೦೨ ರನ್ ಗಳಿಸಿ ಎದುರಾಳಿ ತಂಡದ ಬೌಲರ್ ಗಳನ್ನು ಲೀಲಾಜಾಲವಾಗಿ ಎದುರಿಸಿದರು. ಬೆಂಗಳೂರಿನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ ಶುಭ್ ಮನ್ ಗಿಲ್ ೧.೮ ಕೋಟಿ ರೂ.ಗೆ ಕೊಲ್ಕತ್ತಾ ನೈಟ್ ರೈಡಱ್ಸ್ ಖರೀದಿಸಿದೆ. ಆದರೆ ಇಂದು  ಸೆಮಿಫೈನಲ್ ಪಂದ್ಯದಲ್ಲಿ ದಿಟ್ಟ ಆಟ ಪ್ರದರ್ಶಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ.

೨೭೩ ರನ್‌ಗಳ ಸವಾಲಿನ ಬೆನ್ನು ಹತ್ತಿದ ಪಾಕಿಸ್ತಾನ ಕೇವಲ ೨೯.೩ ಓವರ್‌ಗಳಲ್ಲಿ ೬೯ ರನ್‌ಗಳಿಗೆ ಅಲೌ ಟಾಯಿತು. ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಪಾಕಿಸ್ತಾನ ತಂಡದ ಆಟಗಾರರು ಸಂಪೂರ್ಣ ವಿಫಲರಾದರು. ಕೇವಲ ೩ ಆಟಗಾರರು ಮಾತ್ರ ೨ ಅಂಕೆಯನ್ನು ತಲುಪಿದರು.

ರೊಹೈಲ್ ನಾಜಿರ್ ೧೮ ರನ್ ಗಳಿಸಿದ್ದನ್ನು ಹೊರತು ಪಡಿಸಿದರೆ, ಉಳಿದ ಆಟಗಾರರು ರನ್ ಗಳಿಸುವಲ್ಲಿ ಪರದಾಡಿ ಬಹುಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ತ್ತ ಹೆಜ್ಜೆ ಹಾಕಿದರು.

ಇಂದಿನ ಪಂದ್ಯದಲ್ಲಿ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲೂ ಶ್ರೇಷ್ಠ ಪ್ರದರ್ಶನ ನೀಡುವ ಮೂಲಕ ಭಾರತ ೨೦೩ ರನ್‌ಗಳ ಭರ್ಜರಿ  ಅಂತರದಿಂದ ಜಯಭೇರಿ ಬಾರಿಸಿ ಫೈನಲ್‌ಗೆ ಲಗ್ಗೆ ಹಾಕಿತು.

ಭಾರತದ ವೇಗದ ಬೌಲರ್ ಇಶಾಂತ್ ಪೋರಲ್ ೧೭ ರನ್‌ಗಳ ನೀಡಿ ೪ ವಿಕೆಟ್ ಕಬಳಿಸಿದರು. ಶಿವಸಿಂಗ್, ರಿಯಾನ್ ಪರಾಗ್ ತಲಾ ೨ ವಿಕೆಟ್ ಪಡೆದರು. ಈಗಾಗಲೇ ೧೯ ವರ್ಷದೊಳಗಿನ ಭಾರತ ತಂಡ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ೪ನೇ ಬಾರಿ ಕಪ್ ಗೆಲ್ಲುವ ವಿಶ್ವಾಸ ಹೊಂದಿದೆ.

Leave a Comment