ಯುವ ಜನರ ಸಮಸ್ಯೆ ಕೇಳೋಱ್ಯಾರು..?

ಸಿರಾ, ಫೆ. ೧೧- ವಿಶ್ವ ಸಂಸ್ಥೆಯ ಪ್ರಕಾರ ಯುವಜನರೆಂದರೆ 15 ರಿಂದ 24 ವರ್ಷ, ಭಾರತೀಯ ಯುವನೀತಿಯ ಪ್ರಕಾರ 15 ರಿಂದ 29 ವರ್ಷ ಹಾಗೂ ಕರ್ನಾಟಕದ ಯುವನೀತಿಯ ಪ್ರಕಾರ 16 ರಿಂದ 30 ವರ್ಷ ಎಂದು ನಾಡಪ್ರಭು ಕೆಂಪೇಗೌಡ ಯುವಜನ ಸಂಘದ ಅಧ್ಯಕ್ಷರಾದ ಮಂಜುನಾಥ.ಜಿ.ಕೆ. ಹೇಳಿದರು.

ತಾಲ್ಲೂಕಿನ ಗುಳಿಗೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಯುವಜನ ಆಯೋಗಕ್ಕಾಗಿ ಯುವಾಂದೋಲನ ಎಂಬ ಅಭಿಯಾನದಡಿಯಲ್ಲಿ ಆಚರಿಸಲಾದ ಯುವಸಮಯ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದ 130 ಕೋಟಿ ಜನಸಂಖ್ಯೆಯಲ್ಲಿ 36 ಕೋಟಿ ಯುವಜನರಿದ್ದಾರೆ ಮತ್ತು ಕರ್ನಾಟಕದಲ್ಲಿ 1.86 ಕೋಟಿ ಯುವಜನರಿದ್ದಾರೆ. ಆದರೆ ಪ್ರಯೋಜನವೇನು?

ಇಷ್ಟು ದೊಡ್ಡ ಯುವಸಮುದಾಯ ಹೊಂದಿರುವ ಭಾರತದಂತ ಯುವರಾಷ್ಟ್ರದಲ್ಲಿ ಅತಿ ಹೆಚ್ಚು ತಿರಸ್ಕರಿಸಲ್ಪಟ್ಟ ಸಮುದಾಯ ಕೂಡ ಇದೇ ಆಗಿದೆ. ಹೇಗೆ ಅಂತೀರಾ? ಈ ಸಮುದಾಯಕ್ಕೆ ಯಾವುದೇ ಸ್ಪಷ್ಟ ಹಕ್ಕಿಲ್ಲ, ತನ್ನ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ, ಎಷ್ಟೇ ಓದಿದರೂ ಕೆಲಸ ಸಿಗುತ್ತದೆ ಎಂಬ ಭದ್ರತೆ ಇಲ್ಲ, ಸ್ವಂತ ಉದ್ಯೋಗ ಮಾಡುತ್ತೇವೆ ಎಂದಾಗ ಅನುಭವ ಇಲ್ಲದೆ ಏನು ಮಾಡುವೆ ಎಂದು ಅಲ್ಲಗಳೆಯುತ್ತಾರೆ, ವ್ಯವಸಾಯ ಮಾಡುತ್ತೇವೆ ಎಂದರೆ “ವ್ಯವಸಾಯ ಮನೆ ಮಂದಿ ಎಲ್ಲಾ ಸಾಯ” ಎಂಬ ಸಿದ್ಧ ವಾಕ್ಯ ಹೇಳಿ ನಮ್ಮ ಹುಮ್ಮಸ್ಸು ಮತ್ತು ಆತ್ಮವಿಶ್ವಾಸವನ್ನು ಕುಗ್ಗಿಸುತ್ತಾರೆ. ಹಾಗಾದರೆ ಯುವಜನರಾದ ನಾವು ಈ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುವುದಾದರೂ ಯಾರ ಬಳಿ? ನಮಗೇನಾದರೂ ಪ್ರತ್ಯೇಕ ಆಯೋಗವಿದೆಯೇ? ಇಲ್ಲ. ನಮಗೆ ಅಂತ ಇರುವ ಇಲಾಖೆ ಒಂದೇ. ಅದೆಂದರೆ ‘ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ’. ಈ ಇಲಾಖೆಯಲ್ಲಿ ಕ್ರೀಡೆಗೆ ಮಾತ್ರ ಪ್ರಾಶಸ್ತ್ಯ ಬಿಟ್ಟರೆ ಸಬಲೀಕರಣಕ್ಕೆ ಯಾವುದೇ ಅರ್ಥವಿಲ್ಲ. ಹಾಗಾದರೆ ನಮ್ಮ ಸಮಸ್ಯೆ ಕೇಳುವವಱ್ಯಾರು? ಎಂದು ವಿದ್ಯಾರ್ಥಿಗಳನ್ನು ಕೇಳಿದರು.

ವೃತ್ತಿ ಶಿಕ್ಷಣದ ಮಾಹಿತಿ ಮತ್ತು ಮಾರ್ಗದರ್ಶನದ ಹಕ್ಕು, ಉನ್ನತ ಶಿಕ್ಷಣದ ಹಕ್ಕು, ಘನತೆ ಮತ್ತು ಶೋಷಣೆ ರಹಿತ ಉದ್ಯೋಗದ ಹಕ್ಕು, ಶೈಕ್ಷಣಿಕ ಸಂಸ್ಥೆ, ದುಡಿಯುವ ಸ್ಥಳ ಮತ್ತು ಮನೆಗಳಲ್ಲಿ ತಾರತಮ್ಯ ತಡೆ ಮತ್ತು ಶೋಷಣೆ ತಡೆ ಹಾಗೂ ಭದ್ರತೆಯ ಹಕ್ಕು, ಆಪ್ತ ಸಮಾಲೋಚನೆ ಮತ್ತು ಆಪತ್ತು ನಿರ್ವಹಣೆಯ ನೆರವಿನ ಹಕ್ಕು, ವಿದ್ಯಾರ್ಥಿ ಮತ್ತು ಯುವಜನರು ಸಂಘಟಿತರಾಗುವ ಹಕ್ಕು, ಮನೋರಂಜನೆಯ ಹಕ್ಕು, ಪ್ರತಿಭೆ ಮತ್ತು ಆಸಕ್ತಿಯ ವಿಕಸನದ ಹಕ್ಕು,
ಈ ಎಲ್ಲಾ ಹಕ್ಕುಗಳು ಸಾಕಾರಗೊಳ್ಳಲು ಹಾಗೂ ಯುವಜನರ ಶಿಕ್ಷಣ ಮತ್ತು ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದಕ್ಕಾಗಿ “ಯುವಜನ ಆಯೋಗ”.ರಚನೆಯಾಗಲಿ ಎಂದು ಘೋಷಣೆ ಕೂಗುವ ಮೂಲಕ ಯುವಸಮಯವನ್ನು ಆಚರಿಸಲಾಗುತ್ತಿದೆ ಎಂದರು.

ಅಭಿಯಾನದಲ್ಲಿ ನಾಡಪ್ರಭು ಕೆಂಪೇಗೌಡ ಯುವಜನ ಸಂಘದ ಸಕ್ರಿಯ ಸದಸ್ಯರಾದ ಮೇಘ ರಾಮದಾಸ್, ಪ್ರಥಮ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Comment