ಯುವ ಕಾಂಗ್ರೆಸ್ ಮುಖಂಡನ ಹತ್ಯೆ

ಸಿಪಿಐ ಕಾರ್ಯಕರ್ತರಿಂದ ಕೃತ್ಯ ಶಂಕೆ
ಕಣ್ಣೂರು, ಫೆ.೧೩- ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಮೊದಲು ನಾಡ ಬಾಂಬ್ ಎಸೆದು ನಂತರ ಮಾರಕಾಸ್ತ್ರಗಳಿಂದ ಥಳಿಸಿದ ಪರಿಣಾಮ ಯುವ ಕಾಂಗ್ರೆಸ್ ಮುಖಂಡನೋರ್ವ ಬಲಿಯಾದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ಮಟ್ಟೂರಿನಲ್ಲಿ ನಡೆದಿದೆ. ಸುಹೇಬ್(೩೦) ಕೊಲೆಗೀಡಾದ ಯುವಕ. ಸಿಪಿಐ(ಎಂ) ಕಾರ್ಯಕರ್ತರು ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ. ಘಟನೆಯನ್ನು ಖಂಡಿಸಿ ಇಂದು ಜಿಲ್ಲಾದ್ಯಂತ ಹರತಾಳಕ್ಕೆ ಕರೆ ನೀಡಲಾಗಿದೆ.
ತೀವ್ರ ಗಾಯಗೊಂಡಿದ್ದ ಸುಹೇಬ್‌ನನ್ನು ಕಣ್ಣೂರು ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಕೊನೆಯುಸಿರೆಳೆದಿದ್ದಾನೆ. ಗಾಯಗೊಂಡಿರುವ ಇನ್ನಿಬ್ಬರ ಜೀವಕ್ಕೆ ಅಪಾಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆಯಾಗಿರುವ ಸುಹೇಬ್, ಮಟ್ಟನೂರು ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದು, ತೆರೂರು ಬಳಿಯ ಟೀ ಅಂಗಡಿಯಲ್ಲಿ ರಿಯಾಜ್ ಮತ್ತು ನೌಶಾದ್ ಎಂಬುವವರೊಂದಿಗೆ ಟೀ ಕುಡಿಯುತ್ತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ.
ಕಳೆದ ಜನವರಿ ತಿಂಗಳಲ್ಲಿ ಇದೇ ಪ್ರದೇಶದಲ್ಲಿ ಎಬಿವಿಪಿ ವಿದ್ಯಾರ್ಥಿ ಮುಖಂಡ ಶ್ಯಾಂ ಪ್ರಸಾದ್ ಎಂಬಾತನನ್ನು ಮೂವರು ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಬೆನ್ನಟ್ಟಿ ಕೊಲೆಗೈದು ಪರಾರಿಯಾಗಿತ್ತು. ಈ ಪ್ರಕರಣದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ಬಿಜೆಪಿ, ಸಂಘಪರಿವಾರ ಆರೋಪಿಸಿತ್ತು. ವಾರದ ಹಿಂದಷ್ಟೇ ಕಣ್ಣೂರಿನಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿತ್ತು. ಸದಾ ರಾಜಕೀಯ ಪ್ರೇರಿತ ದಾಳಿಯಿಂದ ತಲ್ಲಣಗೊಂಡಿರುವ ಕಣ್ಣೂರಿನಲ್ಲಿ ಇದೀಗ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಹತ್ಯೆಯಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದ್ದು ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ.

Leave a Comment