ಯುವಪೀಳಿಗೆಯಲ್ಲಿ ಮರೆಯಾಗುತ್ತಿದೆ ಮಾನವೀಯ ಮೌಲ್ಯ; ವಿಷಾಧ

ದಾವಣಗೆರೆ.ಆ.13; ಯುವಪೀಳಿಗೆ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ಹಾಗೂ ಸಾಮಾಜಿಕ ಕಾಳಜಿ ವಹಿಸದಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಟ್ರಸ್ಟಿನ ಅಧ್ಯಕ್ಷ ಸಿ. ಆರ್. ವಿರೂಪಾಕ್ಷಪ್ಪ ಕಳವಳ ವ್ಯಕ್ತಪಡಿಸಿದರು.
ನಗರದ ಗಡಿಯಾರ ಕಂಬದ ಬಳಿರುವ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಸಭಾಂಗಣದಲ್ಲಿಂದು ನಡೆದ ವಿದ್ಯಾರ್ಥಿ ವೇತನಾ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು ಮಕ್ಕಳನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಅಥವಾ ಸುಸಂಸ್ಕೃತರನ್ನಾಗಿಸುವಲ್ಲಿ ಕೆಲ ಪೋಷಕರು, ಶಿಕ್ಷಣ ಸಂಸ್ಥೆಗಳು ವಿಫಲವಾಗುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳು ಅತ್ಯಂತ ಸೂಕ್ಷ್ಮಮತಿಗಳಾಗುತ್ತಿದ್ದಾರೆ. ಸೋಲು ಬಂದಾಗ ವಿವೇಚನೆ ಇಲ್ಲದೆ ಆತ್ಮಹತ್ಯೆ ಮುಂತಾದ ಮಾರ್ಗ ಹಿಡಿಯುವುದು ವಿಷಾಧಕರ. ಸೋಲು ಎನ್ನುವುದು ಗೆಲುವಿನ ಮೆಟ್ಟಿಲು ಎಂದುಕೊಂಡ ಪುನಃ ಸಾಧನೆ , ಪ್ರಯತ್ನದಿಂದ ಗುರಿ ಸಾಧಿಸಬೇಕು. ಸೋಲು ಗೆಲುವುಗಳನ್ನು ಸಮಚಿತ್ತರಾಗಿ ಸ್ವೀಕರಿಸಬೇಕು. ದಿನಬೆಳಗಾದರೆ ಪತ್ರಿಕೆಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ. ರ್ಯಾಗಿಂಗ್, ಪ್ರಾಥಮಿಕ, ಪೌಢಶಾಲಾ ವಿದ್ಯಾಭ್ಯಾಸದ ಹಂತಗಳಲ್ಲಿ ದುಶ್ಚಟಗಳಿಗೆ ದಾಸರಾಗುತ್ತಿರುವುದು ವಿಷಾದದ ಸಂಗತಿ. ಈ ಎಲ್ಲಾ ವಿಪರ್ಯಾಸಗಳಿಗೆ ಪೋಷಕರು ತಮ್ಮ ಮಕ್ಕಳ ಮೇಲೆ ತೋರಿಸುವ ಅತೀಯಾದ ಪ್ರೀತಿ, ಮೇರೆಮೀರಿಸುವ ಭರವಸೆ , ರ್ಯಾಂಕ್‍ಗಳ ಬೇಟೆ, ಜತೆಯಲ್ಲಿ ತಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಹಣಗಳಿಸುವ ಯಂತ್ರವನ್ನಾಗಿಸುವ ಹಗಲು ಕನಸು ಕಾಣುವ ಪೋಷಕರು, ಕೆಲವು ಶಿಕ್ಷಣ ಸಂಸ್ಥೆಗಳ ಅನಾರೋಗ್ಯಕರ ಪೈಪೋಟಿ ಕಾರಣವೆಂದು ಬೇಸರಿಸಿದರು. ಟ್ರಸ್ಟ್ ನಿಂದ ವಿದ್ಯಾರ್ಥಿ ವೇತನ ಪಡೆದ ಮಕ್ಕಳು ಮಾನವೀಯ ಸಂಬಂಧ, ಸಾಮಾಜಿಕ ಕಾಳಜಿ, ಸೇವಾ ಮನೋಭಾವನೆ, ಮಾನವೀಯ ಮೌಲ್ಯಗಳೊಂದಿಗೆ ಆದರ್ಶ ವಿದ್ಯಾರ್ಥಿಗಳಾಗಬೇಕು. ಅಷ್ಟೇ ಅಲ್ಲಾ ಇಂದು ವಿದ್ಯಾರ್ಥಿ ವೇತನ ಪಡೆದ ಮಕ್ಕಳೂ ಸಹ ಮುಂದೊಂದು ದಿನ ಟ್ರಸ್ಟ್ ಸ್ಥಾಪಿಸಿ ಮುಂದಿನ ಪೀಳಿಗೆಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬಿ.ವಾಮದೇವಪ್ಪ,ಸಿ.ಆರ್ ಸತ್ಯನಾರಾಯಣ, ಸಿ.ಆರ್ ಕೃಷ್ಣಮೂರ್ತಿ, ಆರ್.ಆರ್ ರಮೇಶ್ ಬಾಬು ಮತ್ತಿತರರಿದ್ದರು.

Leave a Comment