ಯುವತಿ ಜೊತೆ ಅವಧೂತ ಸ್ವಾಮೀಜಿ ನಾಪತ್ತೆ

ಕೋಲಾರ, ಫೆಬ್ರವರಿ 27: ಪಾದ ಪೂಜೆ ಮಾಡುತ್ತಿದ್ದ ಯುವತಿಯ ಜೊತೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದ ದತ್ತಾತ್ರೇಯ ಅವಧೂತ ಸ್ವಾಮೀಜಿ (40) ನಾಪತ್ತೆಯಾಗಿದ್ದಾರೆ.

ಕೋಲಾರ ತಾಲ್ಲೂಕಿನ ಹೊಳಲಿ ಗ್ರಾಮದ 20 ವರ್ಷದ ಯುವತಿ ಶಿವರಾತ್ರಿಯ ದಿನವಾದ ಸೋಮವಾರದ ರಾತ್ರಿಯಿಂದ ನಾಪತ್ತೆಯಾಗಿದ್ದು. ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದಾರೆ. ಯುವತಿ ಆಗಾಗ ಮಠಕ್ಕೆ ಬಂದು ಸ್ವಾಮೀಜಿಯ ಪಾದ ಪೂಜೆ ಮತ್ತು ಇತರೆ ಸಹಾಯ ಮಾಡುತ್ತಿದ್ದಳು. ಈಗ ಸ್ವಾಮೀಜಿ ಆ ಯುವತಿಯ ಜೊತೆ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.

ಹೊಳಲಿ ಗ್ರಾಮದ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ಸ್ವಾಮೀಜಿ ಮೂಲತಃ ಬಾಗಲಕೋಟೆಯ ಮುಧೋಳದವರು. ಕೆಲವೇ ತಿಂಗಳ ಹಿಂದೆ ಗ್ರಾಮಕ್ಕೆ ಬಂದು ಮಠವನ್ನು ಅಭಿವೃದ್ಧಿಪಡಿಸುತ್ತೇನೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದು, ಇದೀಗ ಈ ಸ್ವಾಮೀಜಿ ಯುವತಿಯ ಜೊತೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.

ಯುವತಿಯ ಅಣ್ಣನೂ ಅದೇ ಮಠದಲ್ಲಿ ಕೆಲಸ ಮಾಡುತ್ತಿದ್ದು, ಸ್ವಾಮೀಜಿ ಇಂದು ಆತನಿಗೆ ದೂರವಾಣಿ ಕರೆ ಮಾಡಿ, ನಾವಿಬ್ಬರೂ ತಿರುಪತಿಗೆ ಬಂದಿದ್ದು, ಅಲ್ಲಿ ಮದುವೆಯನ್ನೂ ಆಗಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ವಾಪಸ್ ಆಗುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.

ಸ್ವಾಮೀಜಿಯೊಂದಿಗೆ ತಮ್ಮ ಮನೆ ಮಗಳು ನಾಪತ್ತೆಯಾಗಿದ್ದಾಳೆ. ಸ್ವಾಮೀಜಿ ಪಾದ ಪೂಜೆಗೆಂದು ಆಕೆ ಆಗಾಗ್ಗೆ ಮಠಕ್ಕೆ ಹೋಗುತ್ತಿದ್ದಳು. ಸ್ವಾಮೀಜಿಯೇ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಆ ಯುವತಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರು ದಾಖಲಿಸಿ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಸ್ವಾಮೀಜಿ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

Leave a Comment