ಯುವತಿಯ ಮೇಲೆ ಹಲ್ಲೆ- ದೂರು ದಾಖಲಿಸಿದ್ದಕ್ಕೆ ಕೊಲೆ ಬೆದರಿಕೆ

ಮೈಸೂರು. ಆ.6- ನಗರದ ಪಬ್ ಒಂದರಲ್ಲಿ ಯುವತಿಯೋರ್ವಳ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿದ್ದಾರೆಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಜೂನ್ ನಲ್ಲಿ ದೂರು ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವಕರನ್ನು ಬಂಧಿಸಿ ಕ್ರಮಕೈಗೊಂಡಿದ್ದರು. ಇದೀಗ ಯುವತಿಯ ಮೇಲೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆಯ ದೂರು ದಾಖಲಾಗಿದೆ
ಶ್ರೀರಾಂಪುರದಲ್ಲಿ ಜೀವನ್ ಸೃಷ್ಟಿ ಫೌಂಡೇಷನ್, ಡಿ ಅಡಿಕ್ಷನ್ ಸೆಂಟರ್ ಮಾಲೀಕ ಉಮೇಶ್ ಎಂಬವರು ಯುವತಿ ಮಹಾಲಕ್ಷ್ಮಿ ಎಂಬವರ ಮೇಲೆ ಕೊಲೆ ಬೆದರಿಕೆಯೊಡ್ಡಿದ್ದಾರೆಂಬ ದೂರನ್ನು ನೀಡಿದ್ದಾರೆ. ಉಮೇಶ್ ಅವರು ತಮ್ಮ ಕಚೇರಿಯಲ್ಲಿದ್ದ ವೇಳೆ ಜೂ,30 ರಂದು ರಾತ್ರಿ 11 ಗಂಟೆಯ ಸಮಯದಲ್ಲಿ ಅಮೃತ, ಮಹಾಲಕ್ಷ್ಮಿ ಹಾಗೂ ಅವರ ಸ್ನೇಹಿತರು ಕಾರಿನಲ್ಲಿ ಬಂದು ಆಫೀಸ್ ಬಳಿಯಲ್ಲಿ ನಿಂತಿದ್ದ ಮನು ಎಂಬಾತನನ್ನು ಉಮೇಶ ಎಲ್ಲಿ ಎಂದು ಕೇಳಿದ್ದು, ಮನು ನನಗೆ ಗೊತ್ತಿಲ್ಲ ಎಂದು ಹೇಳಿದ್ದಕ್ಕೆ ಮನೆಗೆ ಹಲ್ಲೆ ಮಾಡಿ, ಆಫೀಸಿನ ಗಾಜುಗಳನ್ನು ಒಡೆದು ಹಾಕಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡುವುದರ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಪತ್ರ ಬರೆದಿದ್ದಳು ಎನ್ನಲಾಗಿದೆ. ಮೈಸೂರಿನಲ್ಲಿ ಯುವತಿಯರ ಮೇಲೆ ಹಲ್ಲೆ ನಡೆಯುತ್ತಿದೆ. ಆದರೂ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಳು ಎನ್ನಲಾಗಿದೆ. ಇದೀಗ ಆಕೆಯ ವಿರುದ್ಧವೇ ಕೊಲೆ ಬೆದರಿಕೆಯ ದೂರು ದಾಖಲಾಗಿದ್ದು, ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಿದೆ?.

Leave a Comment