ಯುವತಿಗಾಗಿ ಕಚ್ಚಾಟ ವಿದ್ಯಾರ್ಥಿ ಬಲಿ

ಬೆಂಗಳೂರು, ಆ. ೯- ಯುವತಿಯೊಬ್ಬಳ ವಿಚಾರವಾಗಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳ ಜಗಳ ಓರ್ವನ ಸಾವಿನಲ್ಲಿ ಅಂತ್ಯವಾಗಿರುವ ದುರ್ಘಟನೆ ವಿವಿ ಪುರಂನ ಬಸಪ್ಪ ವೃತ್ತದ ತ್ರಿಶಾಲ್ ಲಾಡ್ಜ್‌ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.

ಗುಜರಾತ್ ಮೂಲದ ರೋನಕ್ ಚಾನರಿ (23) ಮೃತಪಟ್ಟಿದ್ದು, ಈ ಸಂಬಂಧ ರಾನಲ್ ಚಾನರಿ ಹಾಗೂ ಅಪೂರ್ವ ಚಾನರಿಯನ್ನು ವಶಕ್ಕೆ ಪಡೆದುಕೊಂಡಿರುವ ವಿವಿ ಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಉತ್ತರ ಹಳ್ಳಿಯ ಬಿ.ವಿ.ಕೆ. ಶಾರದ ಸ್ಕೂಲ್‌ನಲ್ಲಿ ನಡೆಯುತ್ತಿದ್ದ ನರ್ಸಿಂಗ್ ಪರೀಕ್ಷೆ ಬರೆಯಲು ಕಳೆದ ಆ. 2 ರಂದು ನಗರಕ್ಕೆ ಬಂದಿದ್ದ ಗುಜರಾತ್‌ನ 30 ಮಂದಿ ವಿದ್ಯಾರ್ಥಿಗಳು ತ್ರಿಶಾಲ್ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದರು.

ಅವರಲ್ಲಿ ರೋನಕ್ ಚಾನರಿ, ಅಪೂರ್ವ ಚೌನರಿ ಹಾಗೂ ರಾನಲ್ ಚಾನರಿ ಹೊಟೇಲ್‌ನ ನಾಲ್ಕನೇ ಮಹಡಿಯ ಒಂದೇ ಕೊಠಡಿಯಲ್ಲಿ ಉಳಿದುಕೊಂಡಿದ್ದು, ರಾತ್ರಿ ಊಟ ಮುಗಿದ ನಂತರ ಯುವತಿಯೊಬ್ಬಳ ವಿಚಾರದಲ್ಲಿ ಜಗಳ ಮಾಡಿಕೊಂಡಿದ್ದಾರೆ.

ಜಗಳದಿಂದ ಬೇಸತ್ತ ರೋನಕ್ ಚಾನರಿ ಮಧ್ಯರಾತ್ರಿ 12ರ ವೇಳೆ ಕೊಠಡಿಯಿಂದ ಹೊರಬಂದು ಬಾಲ್ಕನಿಯಲ್ಲಿ ನಿಂತಿದ್ದಾಗ ಅಲ್ಲಿಗೆ ಮತ್ತೆ ಜಗಳವಾಡಲು ರಾನಲ್ ಚಾನರಿ ಬಂದಿದ್ದಾನೆ. ಈ ವೇಳೆ ಇಬ್ಬರು ತಳ್ಳಾಡುತ್ತಿದ್ದಾಗ ಆಯತಪ್ಪಿ ಅಲ್ಲಿಂದ  ಕೆಳಗೆ ಬಿದ್ದ ರೋನಕ್ ಚಾನರಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಪ್ರಕರಣ ದಾಖಲಿಸಿರುವ ವಿವಿ ಪುರಂ ಪೊಲೀಸರು, ರಾನಲ್ ಚಾನರಿ ಹಾಗೂ ಅಪೂರ್ವ ಚಾನರಿಯನ್ನು ವಶಕ್ಕೆ ತೆಗೆದುಕೊಂಡು, ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ.

Leave a Comment